ಶನಿವಾರ, ಮೇ 8, 2021
25 °C

ಕರಾವಳಿ, ಮಲೆನಾಡಿನಲ್ಲಿ ಮಳೆಸಿಡಿಲು ಬಡಿದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸೋಮವಾರವೂ ಮಳೆ ಸುರಿದಿದೆ. ಭಾನುವಾರದಂದು ಸಿಡಿಲು ಬಡಿದು ಕುಂಸಿ ಬಳಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮುಂಡಗೋಡ ಬಳಿ 17 ಕುರಿಗಳು ಸತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹಲವೆಡೆ ಸಂಜೆ ಆಲಿಕಲ್ಲು ಸಹಿತ ರಭಸದ ಮಳೆಯಾಗಿದೆ. ಅರ್ಧ ಗಂಟೆ ಧಾರಾಕಾರವಾಗಿ ಮಳೆ ಸುರಿದಿದ್ದು, ಕಾಫಿ, ಅಡಿಕೆ ತೋಟಗಳಲ್ಲಿ ತೇವಾಂಶ ಹೆಚ್ಚಿದೆ. ಬಿಸಿಲಿನಿಂದ ಹಲವೆಡೆ ಹಸಿರು ಒಣಗತೊಡಗಿತ್ತು. ಕೃಷಿಕರಲ್ಲಿ ಮಳೆ ಭರವಸೆ ಮೂಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿಯಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಮಂಗಳೂರಿನಲ್ಲಿ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಆಯಿತು. ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಸುತ್ತಲಿನ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಜೋರಾಗಿ ಮಳೆಯಾಯಿತು. ಮುಂಡಗೋಡದ ಶಿಂಗನಹಳ್ಳಿ ಸಿಡಿಲು ಬಡಿದು 17 ಕುರಿಗಳು ಸತ್ತಿವೆ. ಶಿಂಗನಳ್ಳಿಯಲ್ಲಿ ಮನೆಗೂ ಸಿಡಿಲು ಬಡಿದಿದೆ, ಯಾವುದೇ ಅನಾಹುತವಾಗಿಲ್ಲ. ಕಾತೂರ, ನಂದಿಪುರ,ಶಿಂಗನಹಳ್ಳಿ ಗ್ರಾಮದಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರದಲ್ಲೂ ಬಿರುಸಿನ ಮಳೆ ಸುರಿದಿದೆ. ಕರಾವಳಿಯಾದ್ಯಂತ ಅಲ್ಲಲ್ಲಿ ಮೋಡ ಕವಿದ ವಾತಾವರಣವಿದ್ದು, ಸೆಕೆಯ ತೀವ್ರತೆ ಹೆಚ್ಚಿದೆ. 

ಕುಂಸಿ ಸಮೀಪದ ಆಯನೂರಿನ ಚಾಮುಂಡಿಪುರದಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು ಶಿವಮೊಗ್ಗದ ಅಣ್ಣಾನಗರ ನಿವಾಸಿ ಆದಿಲ್ (18) ಮೃತಪಟ್ಟಿದ್ದಾರೆ. ಶುಂಠಿ ಕಣದಲ್ಲಿ ಕೆಲಸ ಮಾಡುವಾಗ ಅವಘಡ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು