ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್‌ ಟೋಲ್‌ಗೇಟ್‌: ಭುಗಿಲೆದ್ದ ಜನಾಕ್ರೋಶ

ಪೊಲೀಸ್‌ ಕೋಟೆ ಭೇದಿಸಿ ಟೋಲ್‌ ಬೂತ್‌ಗೆ ಮುತ್ತಿಗೆ: ಪ್ರತಿಭಟನಕಾರರ ಬಂಧನ–ಬಿಡುಗಡೆ
Last Updated 18 ಅಕ್ಟೋಬರ್ 2022, 20:28 IST
ಅಕ್ಷರ ಗಾತ್ರ

ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್‌ಗೇಟ್‌ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರರು ಪೊಲೀಸ್‌ ಸರ್ಪಗಾವಲನ್ನು ಭೇದಿಸಿ ಟೋಲ್‌ ಬೂತ್‌ಗೆ ಮಂಗಳವಾರ ಮುತ್ತಿಗೆ ಹಾಕಿದರು.

ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಕರೆಯ ಮೇರೆಗೆ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆಗಳಿಂದ ಜನ ಬಂದಿದ್ದರು. ಟೋಲ್‌ಗೇಟ್‌ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಬಂದೋಬಸ್ತ್‌ಗಾಗಿ 600ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

ಶಾಂತಿಯುತವಾಗಿಯೇ ಆರಂಭವಾದ ಪ್ರತಿಭಟನೆ ಬಳಿಕ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಹೆದ್ದಾರಿಯಲ್ಲಿ ಕುಳಿತು ಘೋಷಣೆ ಕೂಗುತ್ತಿದ್ದ ಪ್ರತಿಭಟನಕಾರರು ಏಕಾಏಕಿ ಟೋಲ್‌ಗೇಟ್‌ನತ್ತ ದೌಡಾಯಿಸಿದರು. ಟೋಲ್‌ಗೇಟ್‌ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಕೋಟೆ ಕಟ್ಟಿನಿಂತಿದ್ದ ಪೊಲೀಸರನ್ನು ತಳ್ಳಿ ಮುನ್ನುಗ್ಗಿದ್ದ ಪ್ರತಿಭಟನಕಾರರು ಟೋಲ್‌ ಬೂತ್‌ಗಳನ್ನು ಸುತ್ತುವರಿದರು. ಟೋಲ್‌ ಬೂತ್‌ ಮೇಲೇರಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಒಂದು ಬೂತ್‌ನ ಗಾಜು ಪುಡಿಪುಡಿಯಾಯಿತು.

ತಮ್ಮನ್ನು ಬಂಧಿಸಲು ಪೊಲೀಸರು ಮುಂದಾದಾಗ ಕೆಲ ಪ್ರತಿಭಟನಕಾರರು ಪ್ರತಿರೋಧ ಒಡ್ಡಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ನಡೆಯಿತು. ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ‌ಕೆಲವು ಪ್ರತಿಭಟನಕಾರರನ್ನು ನಾಲ್ಕೈದು ಪೊಲೀಸರು ಸೇರಿ ಹೊತ್ತೊಯ್ದು ವಾಹನದೊಳಕ್ಕೆ ತಳ್ಳಿದರು.

ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ಮುನೀರ್‌ ಕಾಟಿಪಳ್ಳ, ಬಿ.ಕೆ.ಇಮ್ತಿಯಾಜ್‌, ಸುನಿಲ್‌ ಕುಮಾರ್‌ ಬಜಾಲ್‌, ಸಂತೋಷ್‌ ಬಜಾಲ್‌, ಕಾಂಗ್ರೆಸ್‌ ಮುಖಂಡರಾದ ವಿನಯ್‌ ಕುಮಾರ್‌ ಸೊರಕೆ, ಮಿಥುನ್‌ ರೈ, ಐವನ್‌ ಡಿಸೋಜಾ, ಶಕುಂತಳಾ ಶೆಟ್ಟಿ, ಮೊಯ್ದಿನ್‌ ಬಾವ, ಜೆ.ಆರ್‌.ಲೋಬೊ, ಪಿ.ವಿ.ಮೋಹನ್‌, ಪ್ರತಿಭಾ ಕುಳಾಯಿ, ಶಾಲೆಟ್‌ ಪಿಂಟೊ, ವಕೀಲರಾದ ದಿನೇಶ್‌ ಹೆಗ್ಡೆ ಉಳೆಪಾಡಿ, ಪದ್ಮರಾಜ್‌ ಸೇರಿದಂತೆ ಹಲವರನ್ನು ಬಂಧಿಸಿದರು.

‘182 ಜನ ಪ್ರತಿಭಟನಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು‘ ಎಂದು ಪೊಲೀಸರು ತಿಳಿಸಿದರು. ಪ್ರತಿಭಟನೆ ಮುಗಿಯುತ್ತಿದ್ದಂತೆ ಇಲ್ಲಿ ಮತ್ತೆ ಟೋಲ್‌ ಸಂಗ್ರಹ ಆರಂಭಗೊಂಡಿತು. ಮುಂದಿನ ಹೋರಾಟದ ಬಗ್ಗೆ ಬುಧವಾರ ನಿರ್ಧರಿಸಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT