ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯ ಪರಿಷ್ಕರಣೆ ಹಿಂದೆ ಯಾವ ಸಿದ್ಧಾಂತ?’ ಹಲವು ಪ್ರಮುಖರ ಪ್ರಶ್ನೆ

ಪ್ರೊ. ಬಿ.ಕೆ. ಚಂದ್ರಶೇಖರ್‌, ಸಿ.ಎನ್‌.ರಾಮಚಂದ್ರನ್ ಸೇರಿ ಹಲವು ಪ್ರಮುಖರ ಪ್ರಶ್ನೆ
Last Updated 2 ಜುಲೈ 2022, 21:39 IST
ಅಕ್ಷರ ಗಾತ್ರ

ಬೆಂಗಳೂರು: ‘ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ತೆಗೆದುಹಾಕಿರುವ ಮತ್ತು ಹೊಸದಾಗಿ ಸೇರಿಸಿರುವ ಪಠ್ಯಗಳನ್ನು ನೋಡಿದರೆ, ಆ ಸಮಿತಿಯಲ್ಲಿ ಇದ್ದವರಿಗೆ ಯಾವ ಜೀವಪರ ಮೌಲ್ಯವೂ ಬೇಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದು ಸಿ.ಎನ್.ರಾಮಚಂದ್ರನ್,
ಕೆ.ಮರುಳಸಿದ್ದಪ್ಪ, ಪ್ರೊ. ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಈ ಹೇಳಿಕೆಗೆ ಹಿ.ಶಿ.ರಾಮಚಂದ್ರೇಗೌಡ, ಎಸ್.ಜಿ.ಸಿದ್ಧರಾಮಯ್ಯ, ಕಾಳೇಗೌಡ ನಾಗವಾರ, ಬಂಜಗೆರೆ‌ ಜಯಪ್ರಕಾಶ್, ದಿನೇಶ್ ಅಮೀನ್ ಮಟ್ಟು ಅವರೂ ಸಹಮತವ್ಯಕ್ತಪಡಿಸಿದ್ದಾರೆ.

‘10ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಸಮಿತಿಯು ಪರಿಷ್ಕರಿಸಿರುವುದು ಕೇವಲ ಕೆಲವು ಪದಗಳನ್ನು ಅಥವಾ ವಾಕ್ಯಗಳನ್ನು ಮಾತ್ರ. ಅಂದರೆ, ಸರ್ಕಾರ ಮಾಡಿರುವುದು ಕೇವಲ ತೇಪೆ ಹಾಕುವ ಕೆಲಸ. ಶಿಕ್ಷಣವೆಂದರೆ ಜೀವಪರ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ‌ ಕಲಿಸುವುದು. ಜೀವಪರ ಮೌಲ್ಯಗಳೆಂದರೆ ಪ್ರೀತಿ, ಲಿಂಗ ಸಮಾ ನತೆ, ಜಾತಿ ಪದ್ದತಿ ವಿರೋಧ, ಶಾಂತಿ, ಸರ್ವ ಸಮಾನತೆ ಇತ್ಯಾದಿ’ ಎಂದಿದ್ದಾರೆ.

ಪಠ್ಯಗಳ ಲೋಪಗಳನ್ನು ಪಟ್ಟಿ ಮಾಡಿರುವ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ವೈಚಾರಿಕ ವಲಯದಲ್ಲಿ ಹೆಸರು ಮಾಡಿರುವ ದಲಿತ ಬರಹಗಾರರ ಗದ್ಯ – ಪದ್ಯಗಳನ್ನು ಬಿಟ್ಟಿರುವುದರ ಹಿಂದೆ ಯಾವ ಸಿದ್ಧಾಂತವಿತ್ತು? ಸೇರಿಸಿರುವ ಪಠ್ಯಗಳಲ್ಲಿರುವ ಮೌಲ್ಯಗಳು ಊಳಿಗಮಾನ್ಯ ಸಮಾಜದ ಮೌಲ್ಯಗಳೇ ಹೊರತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲ. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದು ಸರ್ವಥಾಪ್ರಮಾದಾತೀತನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶ ಆಗ ಬೇಕು’ ಎಂದು ಪ್ರತಿಪಾದಿಸುತ್ತಾ‘ವ್ಯಕ್ತಿಪೂಜೆ’ ಎತ್ತಿ ಹಿಡಿಯುವ ಹೆಡಗೇವಾರ್ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ (ಬೇರೆ ಯಾರ ‘ಭಾಷಣ’ವಾಗಲೀ ‘ಬರಹ’ವಾಗಲೀ ಸಿಗಲಿಲ್ಲವೇ?) ಎಂಬ ಲೇಖನ ಸೇರಿಸಿರುವುದಕ್ಕೂ
ಆಕ್ಷೇಪಿಸಿದ್ದಾರೆ.

‘ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ, ಬಾಲ್ಯದಿಂದಲೇ ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಸರಳವಾಗಿ ಪರಿಚಯಿಸುವ ಪಠ್ಯಗಳ ಅಗತ್ಯವನ್ನು ಈಗಲಾದರೂ ಸರ್ಕಾರ ಗಳು ಮನಗಾಣಬೇಕು. ಲಿಂಗಸಂವೇದನೆಯನ್ನು ಬೆಳಗಲು ಇದು ಪರಿಣಾಮಕಾರಿ ಹಾಗೂ ಹೆಣ್ಣಿನ ಸಾಂಪ್ರದಾಯಿಕ ವ್ಯಕ್ತಿತ್ವದ ಮಾದರಿಗಳು ಪಠ್ಯಗಳಲ್ಲಿ ಇರದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಹೆಚ್ಚಿನ ಶ್ರಮ ಹಾಗೂ ಬದ್ಧತೆಗಳು ಕೌಟುಂಬಿಕ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ ನಿರ್ಣಾಯಕ ಎನ್ನುವುದನ್ನು ಎತ್ತಿ ಹಿಡಿಯುವ ನಿರೂಪಣೆಗಳು ಪಠ್ಯದಲ್ಲಿರಬೇಕು’ ಎಂದಿದ್ದಾರೆ.

‘ಮಹಾತ್ಮಗಾಂಧಿಯವರ ಹತ್ಯೆಯ ಘಟನೆ, ಹಂತಕ ಗೋಡ್ಸೆ ಕುರಿತ ಮಾಹಿತಿ ಯನ್ನೆಲ್ಲಾ ಕೈ ಬಿಟ್ಟಿದ್ದು ‘ಆರೋಗ್ಯಕರ ಚಿಂತನೆ’ಗೆ ಮಾರಕವಾಗಿತ್ತೇ’ ಎಂದೂ ಪ್ರಶ್ನಿಸಿರುವ ಅವರು, ‘20ನೇ ಶತ ಮಾನದ ಬಹುದೊಡ್ಡ ಮುತ್ಸದ್ದಿ ಜವಾಹರಲಾಲ್ ನೆಹರು ಅವರು ಬರೆದಿದ್ದ, ನಿರಂತರವಾಗಿ ಪ್ರತಿ
ಪಾದಿಸಿದ್ದ, ಭಾರತದ ‘ವಿವಿಧತೆ ಮತ್ತುಪ್ರಜಾಪ್ರಭುತ್ವದ ಮಾದರಿ’ ಎಂಬ ಪಠ್ಯ ಉತ್ತಮ ಚಿಂತನೆಗೆ ವಿರುದ್ಧವಾಗಿತ್ತೇ’ ಎಂದೂ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT