ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯದ ಉನ್ನತ ತನಿಖೆಗೆ ಆಗ್ರಹಿಸಿ ‘ಮಕ್ಕಳೊಂದಿಗೆ ನಾವು’ ಜಾಥಾ

ಲೈಂಗಿಕ ದೌರ್ಜನ್ಯ ಪ್ರಕರಣದ ಉನ್ನತ ತನಿಖೆಗೆ ವಿವಿಧ ಸಂಘಟನೆಗಳ ಒತ್ತಾಯ
Last Updated 10 ಸೆಪ್ಟೆಂಬರ್ 2022, 18:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ‌ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಉನ್ನತ ತನಿಖೆಗೆ ಒಳ ಪಡಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ‘ಮಕ್ಕಳೊಂದಿಗೆ ನಾವು’ ಎಂಬ ಜಾಥಾ ನಡೆಸಿದರು.

ನಗರದ ಕನಕ ವೃತ್ತದಿಂದ ಆರಂಭ ವಾದ ಜಾಥಾ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಬಿ.ಡಿ. ರಸ್ತೆ, ಪ್ರವಾಸಿ ಮಂದಿರದ ಮೂಲಕ ಒನಕೆ ಓಬವ್ವ ವೃತ್ತ ತಲುಪಿತು. ಬಹಿರಂಗ ಸಭೆ ನಡೆಸಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

‘ಬಾಲನ್ಯಾಯ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಸಂತ್ರಸ್ತರಿಗೆ ಸುರಕ್ಷಿತ ಮನೋಭಾವ ಉಂಟು ಮಾಡಿಲ್ಲ. ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣವಾಗಿಲ್ಲ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆ. ಸಾಕ್ಷ್ಯ ನಾಶ ಮಾಡಲು ಅವಕಾಶ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಸಂತ್ರಸ್ತ ಬಾಲಕಿಯರ ‍ಪರ ನಿಲ್ಲಬೇಕಾದ ಸರ್ಕಾರ ಆರೋಪಿ ಗಳ ಪರವಾಗಿದೆ. ಮಂತ್ರಿಗಳು ಆರೋಪಿಗಳನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿದ್ದಾರೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಬಗೆಗೆ ವಿಶ್ವಾಸ ಉಳಿದಿಲ್ಲ. ನ್ಯಾಯಾಂಗದ ಮೂಲಕ ಮಾತ್ರವೇ ನ್ಯಾಯ ಸಿಗಲು ಸಾಧ್ಯ’ ಎಂದು ಒತ್ತಾಯಿ ಸಿದರು.

‘ಮಾನವೀಯತೆ ನೆಲೆಯ ಮೇಲೆ ಅನೇಕರು ಈ ಹೋರಾಟವನ್ನು ಬೆಂಬಲಿಸಿದ್ದಾರೆ. ಮಕ್ಕಳ ಪರವಾಗಿ ನಾವಿದ್ದೇವೆ ಎಂಬ ಸಂದೇಶವನ್ನು ರವಾ ನಿಸುವ ಉದ್ದೇಶದಿಂದ ಈ ಜಾಥಾ ನಡೆ ಸಲಾಗಿದೆ. ನೊಂದ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗಬೇಕು. ಇದರಲ್ಲಿ ಸ್ವಜನಪಕ್ಷಪಾತಕ್ಕೆ ಅವಕಾಶ ಇಲ್ಲದೇ ತನಿಖೆ ನಡೆಸಬೇಕು. ಪೊಲೀಸ್‌ ತನಿಖೆಯಲ್ಲಿ ಹಲವು ಲೋಪಗಳು ಬೆಳಕಿಗೆ ಬಂದಿವೆ’ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ದೂರಿದರು.

ಬೆಂಗಳೂರಿನ ನೈಜ ಹೋರಾಟ ಗಾರರ ಸಂಘದ ವೆಂಕಟೇಶ ಮಾತನಾಡಿ, ‘ದೌರ್ಜನ್ಯಕ್ಕೀಡಾದ ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಈ ಜಾಥಾ ನಡೆಸಲಾಗಿದೆ. ಇದು ಯಾರ ವಿರುದ್ಧವೂ ಅಲ್ಲ, ಪರವೂ ಅಲ್ಲ. ಪೊಲೀಸ್ ವ್ಯವಸ್ಥೆ ಆರೋಪಿ ಪರ ಇದೆ. ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಬೇಕು ಎಂದು ಪಟ್ಟುಹಿಡಿದು ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಪ್ರತಿನಿಧಿಯೊಬ್ಬರು ಬಂದು ಮನವಿ ಸ್ವೀಕರಿಸಿದರು.

ಶಿವಮೊಗ್ಗದ ರಂಗಕರ್ಮಿ ಪ್ರತಿಭಾ ಸಾಗರ, ಮೈಸೂರಿನ ಆರ್‌ಎಲ್‌ಎಚ್‌ಪಿ ಸಂಸ್ಥೆಯ ಸರಸ್ವತಿ, ‘ವಿ ಕೇರ್‌’ ಸಂಸ್ಥೆಯ ಕುಮುದಿನಿ, ಕರ್ನಾಟಕ ರಕ್ಷಣಾ ವೇದಿಕೆಯ ಪುರುಷೋತ್ತಮ, ಪಿಯು ಸಿಎಲ್‌ನ ಡಾ.ಲಕ್ಷ್ಮೀನಾರಾಯಣ, ರತಿ ರಾವ್‌, ಅಪರ್ಣಾ, ಪ್ರೊ.ಸಿ.ಕೆ.ಮಹೇಶ್‌, ದುರುಗೇಶ್‌ ಇದ್ದರು.

***

ನ್ಯಾಯಾಲಯದ ಕಣ್ಗಾವಲಿನಲ್ಲಿ ಪ್ರಕರಣದ ತನಿಖೆ ನಡೆದರೆ ಮಾತ್ರ ನ್ಯಾಯ ಸಿಗಲು ಸಾಧ್ಯ. ಸಂತ್ರಸ್ತೆಯರಿಗೆ ನ್ಯಾಯ ಸಿಗುವವರೆಗೆ ಈ ಹೋರಾಟ ಮುಂದುವರಿಯಲಿದೆ.

– ಪರಶುರಾಮ್‌, ಒಡನಾಡಿ ಸೇವಾ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT