ಬುಧವಾರ, ಮೇ 25, 2022
23 °C

ಮರಾಠಿ ನೃತ್ಯ ಆಯೋಜನೆ ಕಸಾಪ ಇತಿಹಾಸದಲ್ಲಿ ಕಪ್ಪು ಚುಕ್ಕೆ: ಮಹೇಶ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ ಆಯೋಜಿಸಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಇತಿಹಾಸದಲ್ಲಿ ಕಪ್ಪು ಚುಕ್ಕೆ. ಇಂತಹ ಕಾರ್ಯ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ. 

ಈ ಬಗ್ಗೆ ಅವರು ಕಸಾಪ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪೀರ ವಾಲೀಕಾರ ಅವರಿಗೆ ಪತ್ರ ಬರೆದಿದ್ದಾರೆ. ‘ಮರಾಠಿ ನೃತ್ಯ ಆಯೋಜನೆ ಪರಿಷತ್ತಿಗೆ ಮುಜುಗರ ಉಂಟು ಮಾಡಿದೆ. ಹೀಗಾಗಿ, ತಕ್ಷಣವೇ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು. ಮರಾಠಿ ಭಾಷಿಕರು ಬೆಳಗಾವಿಯ ಗಡಿಯಲ್ಲಿ ಇನ್ನಿಲ್ಲದ ದಾಂಧಲೆ ಸೃಷ್ಟಿಸುತ್ತಿದ್ದಾರೆ. ಸದಾ ಕನ್ನಡಿಗರನ್ನು ಕೆಣಕುತ್ತ ಶಾಂತಿ ಮತ್ತು ಶಿಸ್ತನ್ನು ಉಲ್ಲಂಘಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆ ಪವಿತ್ರದ್ದು. ಅದನ್ನು ಯಾವುದೇ ಕಾರಣಕ್ಕೂ ಮಲಿನಗೊಳಿಸಬಾರದು. ಇಂತಹ ಕೃತ್ಯಗಳು ಮರುಕಳಿಸಬಾರದು’ ಎಂದು ಎಚ್ಚರಿಸಿದ್ದಾರೆ.

‘ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಬಾರದು. ಈ ರೀತಿ ಘಟನೆ ಮರುಕಳಿಸಿದರೆ ಪರಿಷತ್ತಿನ ನಿಬಂಧನೆಗಳ ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಈ ಪತ್ರಕ್ಕೆ ಉತ್ತರಿಸಿರುವ ಹಾಸೀಂಪೀರ ವಾಲೀಕಾರ, ‘ಇಂತಹ ತಪ್ಪುಗಳು ಇನ್ನೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇನೆ. ಈ ಘಟನೆಯಿಂದ ಕನ್ನಡ ಮನಸ್ಸುಗಳಿಗೆ ನೋವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು