ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರಿಟೈಮ್ ಥಿಯೇಟರ್ ಕಮಾಂಡ್‌ನಿಂದ ಬಲ: ರಾಜ್ಯಪಾಲ ಥಾವರಚಂದ್ ಗೆಹಲೋತ್

Last Updated 4 ಡಿಸೆಂಬರ್ 2021, 15:23 IST
ಅಕ್ಷರ ಗಾತ್ರ

ಕಾರವಾರ: ‘ಭಾರತೀಯ ಸಶಸ್ತ್ರ ಪಡೆಗಳ ಮೂರೂ ವಿಭಾಗಗಳನ್ನು ಒಳಗೊಂಡಿರುವ ಮೆರಿಟೈಮ್ ಥಿಯೇಟರ್ ಕಮಾಂಡ್ ಕೇಂದ್ರ ಕಚೇರಿಯು ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯಲ್ಲಿ ಸ‌್ಥಾಪನೆಯಾಗಲಿದೆ. ಇದರಿಂದ ದೇಶದ ರಕ್ಷಣಾ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ಬರಲಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.

‘ನೌಕಾ ದಿನಾಚರಣೆ’ ಅಂಗವಾಗಿ ಇಲ್ಲಿನ ನೌಕಾನೆಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಬ್ಯಾಂಡ್ ವಾದನ (ಬೀಟಿಂಗ್ ರಿಟ್ರೀಟ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೌಕಾಪಡೆಯ ಕರ್ನಾಟಕ ವಲಯದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ (ಎಫ್.ಒ.ಕೆ) ಅವರ ನಿವಾಸದ ಮುಂಭಾಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ನಮ್ಮ ದೇಶದೊಂದಿಗೆ ಸಮುದ್ರ ಹಂಚಿಕೊಂಡಿರುವ ದೇಶಗಳೊಂದಿಗೆ ಉತ್ತಮ ಸಂಬಂಧವಿದೆ. ಅದನ್ನು ಮತ್ತಷ್ಟು ಬಲ ಪಡಿಸಲು ಇಂಥ ಯೋಜನೆಗಳು ಅಗತ್ಯವಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಕದಂಬ ನೌಕಾನೆಲೆಯಲ್ಲಿರುವ ನೌಕೆ ಮೇಲೆತ್ತಿ ದುರಸ್ತಿ ಮಾಡುವ ಸೌಲಭ್ಯವು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ದೇಶದ ಸಶಸ್ತ್ರ ಪಡೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸೀಬರ್ಡ್ ಯೋಜನೆಯಡಿ ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಏಷ್ಯಾದ ದೊಡ್ಡ ನೌಕಾನೆಲೆ ಕಾರವಾರದ್ದಾಗಲಿದೆ’ ಎಂದರು.

ಕರ್ನಾಟಕ ನೌಕಾಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಮಾತನಾಡಿ, ‘ಪಾಕಿಸ್ತಾನ ವಿರುದ್ಧದ 1971ರ ಯುದ್ಧದಲ್ಲಿ ಭಾರತದ ಗೆಲುವಿನಲ್ಲಿ ನೌಕಾಪಡೆಯ ಪಾತ್ರ ಮಹತ್ವದ್ದಾಗಿದೆ. ಕರಾಚಿಯ ಬಂದರಿನ ದಾಳಿ ಮಾಡಿ ಗೆಲುವು ಸಾಧಿಸಲಾಯಿತು. ಅಂದಿನಿಂದ ಡಿ.4ನ್ನು ನೌಕಾಪಡೆ ದಿನವಾಗಿ ಆಚರಿಸಲಾಗುತ್ತಿದೆ’ ಎಂಂದು ಹೇಳಿದರು.

‘ಈ ವಿಜಯಕ್ಕೆ 50ನೇ ವರ್ಷವಾಗಿರುವ ಕಾರಣ ಹಾಗೂ ದೇಶದ ಸ್ವಾತಂತ್ರ್ಯದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಕ್ತದಾನ ಶಿಬಿರ, ಶಾಲಾಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಂಗೀತ ಬ್ಯಾಂಡ್ ಮುಂತಾದವು ಸೇರಿವೆ’ ಎಂದು ತಿಳಿಸಿದರು.

ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರಾಜ್ಯಪಾಲಥಾವರಚಂದ್ಗೆಹಲೋತ್, ಯುದ್ಧ ವಿಮಾನ ವಾಹಕ ನೌಕೆ ವಿಕ್ರಮಾದಿತ್ಯದ ಮಾಹಿತಿ ಪಡೆದರು. ಎಫ್.ಒ.ಕೆ ರಿಯರ್ ಅಡ್ಮಿರಲ್ ಮಹೇಶ ಸಿಂಗ್, ನೌಕೆಯ ಕ್ಯಾಪ್ಟನ್ ಸುಶೀಲ್ ಮೆನನ್ ಇದ್ದಾರೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರಾಜ್ಯಪಾಲಥಾವರಚಂದ್ಗೆಹಲೋತ್, ಯುದ್ಧ ವಿಮಾನ ವಾಹಕ ನೌಕೆ ವಿಕ್ರಮಾದಿತ್ಯದ ಮಾಹಿತಿ ಪಡೆದರು. ಎಫ್.ಒ.ಕೆ ರಿಯರ್ ಅಡ್ಮಿರಲ್ ಮಹೇಶ ಸಿಂಗ್, ನೌಕೆಯ ಕ್ಯಾಪ್ಟನ್ ಸುಶೀಲ್ ಮೆನನ್ ಇದ್ದಾರೆ.

ಮಾಹಿತಿ ಪಡೆದ ರಾಜ್ಯಪಾಲರು:

ಕದಂಬ ನೌಕಾನೆಲೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್, ಅಲ್ಲಿ ವಾಸ್ತವ್ಯ ಹೂಡಿದರು. ರಿಯರ್ ಅಡ್ಮಿರಲ್ ಮಹೇಶ್ ಸಿಂಗ್, ನೌಕೆಯ ಕ್ಯಾಪ್ಟನ್ ಸುಶೀಲ್ ಮೆನನ್ ರಾಜ್ಯಪಾಲರನ್ನು ಬರಮಾಡಿಕೊಂಡರು. ಸೀಬರ್ಡ್ ಯೋಜನೆಯ ಎರಡನೇ ಹಂತದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶನಿವಾರ ಕಾಮಗಾರಿಗಳನ್ನು ವೀಕ್ಷಿಸಿದರು. ಯುದ್ಧ ವಿಮಾನ ವಾಹಕ ನೌಕೆ ಐ.ಎನ್.ಎಸ್ ವಿಕ್ರಮಾದಿತ್ಯವು ನಿರ್ವಹಿಸುವ ಕಾರ್ಯಗಳ ಬಗ್ಗೆಯೂ ಮಾಹಿತಿ ಪಡೆದರು.

ಸಂಗೀತಮಯ ಸಂಜೆ:

ನೌಕಾದಿನದ ಅಂಗವಾಗಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಯ ಸಂಗೀತ ಬ್ಯಾಂಡ್‌ ತಂಡದವರು ವಿವಿಧ ದೇಶಭಕ್ತಿ ಗೀತೆಗಳನ್ನು ನುಡಿಸಿದರು. ಬಳಿಕ, ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ರಾಷ್ಟ್ರಧ್ವಜವನ್ನು ಅವರೋಹಣ ಮಾಡಲಾಯಿತು. ಇದೇವೇಳೆ, ವಿದ್ಯುತ್ ದೀಪಾಲಂಕೃತ ನೌಕೆಗಳಾದ ಐ.ಎನ್.ಎಸ್ ವಿಕ್ರಮಾದಿತ್ಯ, ಐ.ಎನ್.ಎಸ್ ತಿಲಂಗ್‌ಚಾಂಗ್ ಹಾಗೂಐ.ಎನ್.ಎಸ್ ಮಕರಗಳಿಂದ ಸಿಡಿಮದ್ದು ಸಿಡಿಸಲಾಯಿತು.

ಶಾಸಕಿ ರೂಪಾಲಿ ನಾಯ್ಕ, ಕಾರವಾರ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ್ ಪಿ.ನಾಯ್ಕ, ರಿಯರ್ ಅಡ್ಮಿರಲ್ ದೀಪಕ್ ಕುಮಾರ್ ಗೋಸ್ವಾಮಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ‍ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಇದ್ದರು.

ನೌಕಾಪಡೆ ದಿನಾಚರಣೆಯ ಅಂಗವಾಗಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ವಿಕ್ರಮಾದಿತ್ಯವೂ ಸೇರಿದಂತೆ ವಿವಿಧ ನೌಕೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು
ನೌಕಾಪಡೆ ದಿನಾಚರಣೆಯ ಅಂಗವಾಗಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ವಿಕ್ರಮಾದಿತ್ಯವೂ ಸೇರಿದಂತೆ ವಿವಿಧ ನೌಕೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT