ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಬೃಹತ್‌ ಎಸ್‌.ಟಿ ಸಮಾವೇಶ: ವಾಲ್ಮೀಕಿ ವೇದಿಕೆಯಲ್ಲಿ ಚುನಾವಣೆ ರಣಕಹಳೆ

ಬಳ್ಳಾರಿಯಲ್ಲಿ ಬೃಹತ್‌ ಎಸ್‌.ಟಿ ಸಮಾವೇಶ; ಕಾಂಗ್ರೆಸ್‌ ವಿರುದ್ಧ ಸಮರ ಸಾರಿದ ಬಿಜೆಪಿ ನಾಯಕರು
Last Updated 20 ನವೆಂಬರ್ 2022, 19:35 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಬೆನ್ನಲ್ಲೇ, ಬಳ್ಳಾರಿ ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಪರಿಶಿಷ್ಟ ಪಂಗಡದ ಬೃಹತ್‌ ಸಮಾವೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ರಣಕಹಳೆ ಮೊಳಗಿತು.

ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ನಿರ್ಮಿಸಿದ್ದ ವಿಶಾಲವಾದ ವೇದಿಕೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಕಾಂಗ್ರೆಸ್‌, ಅದರ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಈ ಪಕ್ಷವನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಮನವಿ ಮಾಡಿದರು.

ಅಕ್ಟೋಬರ್‌ 15ರಂದು ರಾಹುಲ್‌ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಪರ್ಯಾಯ ಎಂಬಂತೆ ಸಂಘಟಿಸಲಾಗಿದ್ದ ಪರಿಶಿಷ್ಟ ಪಂಗಡದ ಸಮಾವೇಶವನ್ನು ಬಿಜೆಪಿ ಅದರಲ್ಲೂ ಸಚಿವ ಶ್ರೀರಾಮುಲು ಪ್ರತಿಷ್ಠೆ ಪ್ರಶ್ನೆಯಾಗಿ ತೆಗೆದುಕೊಂಡಿದ್ದರು.

‘ಕಾಂಗ್ರೆಸ್‌ ಲೂಟಿಕೋರ ಪಕ್ಷ, ಮೋಸಗಾರ ಪಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳನ್ನು ಕೇವಲ ವೋಟ್‌ ಬ್ಯಾಂಕ್‌ಗಳಾಗಿ ಬಳಸಿಕೊಂಡಿದೆ. ಕೇಂದ್ರ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಪರಿಶಿಷ್ಟರು ಮತ್ತು ಹಿಂದುಳಿದವರ ಬದುಕನ್ನು ಬದಲಾಯಿಸಿ, ಸ್ವಾಭಿಮಾನದ ಬದುಕು ಕಲ್ಪಿಸಲು ಶ್ರಮಿಸುತ್ತಿದೆ’ ಎಂದು ಪ್ರತಿಪಾದಿಸಿದರು.

ಬಳ್ಳಾರಿ ನಗರದ ಹೊರ ವಲಯದ 130 ಎಕರೆಯಲ್ಲಿ ಹಾಕಿದ್ದ 3.20 ಲಕ್ಷ ಚದರಡಿಯ ಮುಖ್ಯ ಪೆಂಡಾಲ್‌ನಲ್ಲಿ ಜಮಾಯಿಸಿದ್ದ ಪರಿಶಿಷ್ಟ ಪಂಗಡದ ಜನರ ಸ್ವಾಭಿಮಾನ ಬಡಿದೆಬ್ಬಿಸುವ ಕೆಲಸವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಅರ್ಜುನ್‌ ಮುಂಡಾ, ಪ್ರಲ್ಹಾದ ಜೋಶಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಪರಿಶಿಷ್ಟ ಪಂಗಡದ ನಾಯಕರೂ ಆದ ಸಚಿವ ಬಿ. ಶ್ರೀರಾಮುಲು ಮಾಡಿದರು. ನಾಯಕರ ಮಾತುಗಳಿಗೆ ಸಭಿಕರು ಘೋಷಣೆಗಳನ್ನು ಕೂಗಿ ಸ್ಪಂದಿಸಿದರು.

‘ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ನಿಮ್ಮ ಬದುಕನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದು, ಇವೆರಡೂ ಸರ್ಕಾರದ ಪರ ನಿಲ್ಲಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವದಿಸಬೇಕು ಇದುವರೆಗೆ ಮತಬ್ಯಾಂಕ್‌ ರಾಜಕಾರಣ ಮಾಡಿ ನಿಮ್ಮನ್ನು ವಂಚಿಸಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು’ ಎಂದು ನಡ್ಡಾ ಮನವಿ ಮಾಡಿದರು.

‘ಕೇಂದ್ರದಲ್ಲಿ ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಳ ಮಾಡಿದ ಮೋದಿ ಅವರಿಂದ ಪ್ರೇರಣೆ ಪಡೆದು ರಾಜ್ಯದಲ್ಲೂ ತೀರ್ಮಾನ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಬಡತನ ನಿವಾರಿಸುವ ಕೆಲಸ ಮಾಡಿದೆಯಾ; ಪರಿಶಿಷ್ಟರಿಗೆ ಸ್ವಾಭಿಮಾನದ ಬದುಕು ಕೊಟ್ಟಿದೆಯಾ;ಮೀಸಲಾತಿ ಹೆಚ್ಚಳ ಮಾಡಿದೆಯಾ’ ಎಂದು ಬೊಮ್ಮಾಯಿ ಪ್ರಶ್ನಿಸಿದಾಗ, ಸಭಿಕರು ‘ಇಲ್ಲ, ಇಲ್ಲ’ ಎಂಬ ಉತ್ತರ ಕೊಟ್ಟರು.

‘ಬಳ್ಳಾರಿ ಸಮಾವೇಶ ನೋಡಿ ಕಾಂಗ್ರೆಸ್‌ ನಾಯಕರಿಗೆ ಆಘಾತವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140 ರಿಂದ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 10 ಕ್ಷೇತ್ರಗಳಿದ್ದು,ಎಲ್ಲೆಡೆ ಬಿಜೆಪಿ ಆರಿಸಿ’ ಎಂದು ಬಿಜೆಪಿ ಹಿರಿಯ ಮುಖಂಡ ಬಿ.ಎಸ್‌. ಯಡಿಯೂರಪ್ಪ ಕಾರ್ಯಕರ್ತರಿಗೆ ಮನವಿ ಮಾಡಿದರು.

ಎಸ್‌.ಟಿ ಸಮಾವೇಶಕ್ಕೆ ನಗರವನ್ನು ಕೇಸರಿ ಫ್ಲೆಕ್ಸ್‌ಗಳು, ಬಂಟಿಂಗ್ಸ್‌ ಮತ್ತು ಪೋಸ್ಟರ್‌ಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ಕೇಸರಿ ಧ್ವಜ ಹಾರಾಡಿದವು. ಕಲಾ ತಂಡಗಳಿಂದ ಸಮಾವೇಶಕ್ಕೆ ಜಾತ್ರೆಯ ಕಳೆ ಬಂದಿತ್ತು. ಬೇರೆ ಬೇರೆ ಊರುಗಳಿಂದ ಬಂದಿದ್ದ ಜಾನಪದ ಕಲಾ ತಂಡಗಳು ಪೈಪೋಟಿ ಮೇಲೆ ಪ್ರದರ್ಶನಕ್ಕಿಳಿದಿದ್ದವು.

‘ಇಲ್ಲಿದೆ ಅಹಿಂದ ಸಿದ್ದರಾಮಣ್ಣ!’

‘ಎಲ್ಲಿದೆ ಅಹಿಂದ ಸಿದ್ದರಾಮಣ್ಣ...ಇಲ್ಲಿದೆ ಅಹಿಂದ ನೋಡು ಬಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಸಮಾವೇಶದಲ್ಲಿ ಲೇವಡಿ ಮಾಡಿದರು.

‘ಅಹಿಂದ ಹೆಸರಲ್ಲಿ ರಾಜಕೀಯ ಮಾಡುವಿರಾ; ವೋಟ್‌ ಬ್ಯಾಂಕ್‌ಗಳಾಗಿ ಈ ಸಮುದಾಯಗಳನ್ನು ಬಳಸಿಕೊಳ್ಳುತ್ತೀರಾ; ಇನ್ನು ಮುಂದೆ ನಾಟಕ ನಡೆಯೋಲ್ಲ; ಸುಳ್ಳು ಭರವಸೆಗಳು ನಡೆಯೋಲ್ಲ; ಜನರಿಗೆ ನಿಮ್ಮ ಮೋಸ ಗೊತ್ತಾಗಿದೆ’ ಎಂದು ಬೊಮ್ಮಾಯಿ ಕಾಲೆಳೆದರು.

‘60 ವರ್ಷ ದಲಿತರು, ಶೋಷಿತರು, ಬಡವರು, ಮಹಿಳೆಯರಿಗೆ ನೀವು ಮೋಸ ಮಾಡಿದ್ದೀರಿ; ಶೋಷಣೆ ಮಾಡಿದ್ದೀರಿ; ಅಹಿಂದ ಸಮುದಾಯ ಮತ್ತು ಮಹಿಳೆಯರ ಶಾಪ ನಿಮಗೆ ತಟ್ಟುತ್ತದೆ‘ ಎಂದು ಕುಟುಕಿದರು.

ಪರಿಶಿಷ್ಟ ಪಂಗಡದ ಸಮಾವೇಶದ ಕೇಂದ್ರ ಬಿಂದು ಸಚಿವ ಬಿ. ಶ್ರೀರಾಮುಲು ಅತೀ ಭಾವವೇಶ ಪ್ರದರ್ಶಿಸಿದರು. ಕಾಂಗ್ರೆಸ್‌ ನಾಯಕರು ಅದರಲ್ಲೂ ಸಿದ್ದರಾಮಯ್ಯನವರ ವಿರುದ್ಧ ತೋಳೇರಿಸಿದರು. ಒಂದು ಹಂತದಲ್ಲಿ ಹೆಗಲ ಮೇಲಿದ್ದ ಶಲ್ಯವನ್ನು ತೆಗೆದು ತಲೆಗೆ ಸುತ್ತಿಕೊಂಡು, ‘ನನ್ನನ್ನು ಹಾಸ್ಯ ಮಾಡುತ್ತೀರಾ; ಲೇವಡಿ ಮಾಡುತ್ತೀರಾ; ತಾಕತ್ತಿದ್ದರೆ ಬರ್‍ರಲ್ಲಾ ನೋಡೋಣ; ನಾವೇನು ಬಳೆ ತೊಟ್ಕೊಂಡಿಲ್ಲ‘ ಎಂದು ತೋಳೇರಿಸುತ್ತಿದ್ದಂತೆ ಅವರ ಬೆಂಬಲಿಗರ ಕೇಕೆ, ಶಿಳ್ಳೆ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT