ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತಿ ಭವನ ಅಡಿಗಲ್ಲಿಗೆ ಅಡಿಗಡಿಗೂ ಅಡ್ಡಿ!

*ಬಡ್ಡಿ ಸಮೇತ ₹1.99 ಕೋಟಿ ಅನುದಾನ ವಾಪಸ್‌ಗೆ ಸೂಚನೆ *9 ವರ್ಷಗಳಾದರೂ ಅನುಮೋದನೆ ನೀಡದ ಸರ್ಕಾರ
Last Updated 1 ಅಕ್ಟೋಬರ್ 2021, 18:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡದ ಆಸ್ತಿ’ ಎಂದೇ ಜನಜನಿತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಭವನ ನಿರ್ಮಾಣಕ್ಕೆ ಭೂಮಿ ಹಂಚಿಕೆಯಾಗಿ ಒಂಬತ್ತು ವರ್ಷಗಳಾಗಿವೆ. ಆದರೆ, ಸರ್ಕಾರ ಗಳ ನಿರ್ಲಕ್ಷ್ಯದಿಂದಾಗಿ ಈವರೆಗೂ ಭವನ ನಿರ್ಮಾಣ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ.

ಈ ಎಲ್ಲ ಬೆಳವಣಿಗೆಯ ಮಧ್ಯೆಯೇ ಭವನ ನಿರ್ಮಾಣಕ್ಕೆ ಸರ್ಕಾರ ನೀಡಿದ್ದ ₹1.99 ಕೋಟಿ ಅನುದಾನವನ್ನು ಬಡ್ಡಿ ಸಮೇತ ವಾಪಸ್ ಪಡೆಯಲು ಆರ್ಥಿಕ ಇಲಾಖೆ ಮುಂದಾಗಿದೆ. ಇದು, ಮಾಸ್ತಿ ಅವರು ಹಾಗೂ ಕನ್ನಡ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಈ ಭವನ ನಿರ್ಮಾಣಕ್ಕೆ 2012ರಲ್ಲಿಯೇ ಇಲ್ಲಿನ ಜ್ಞಾನ ಭಾರತಿ ಬಡಾವಣೆಯಲ್ಲಿ 20 ಸಾವಿರ ಚದರ ಅಡಿ ಜಾಗವನ್ನು ಗುರುತಿಸಲಾಗಿತ್ತು.

ಸರ್ಕಾರವೇ ಸ್ಥಾಪಿಸಿದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಭೂಮಿಯನ್ನು ಹಸ್ತಾಂತರಿಸಲಾಗಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿಗೆಈವರೆಗೂ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿಲ್ಲ. ಇದು ಸಾಹಿತ್ಯ ವಲಯದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ಜನಿಸಿದ್ದರಿಂದ ಟ್ರಸ್ಟ್‌ನ ಕಚೇರಿ ಕೋಲಾರದಲ್ಲಿ ನೋಂದಾಯಿಸಲ್ಪಟ್ಟಿದೆ. ಒಟ್ಟು ₹ 8 ಕೋಟಿ ವೆಚ್ಚದಲ್ಲಿ ಮೂರು ಮಹಡಿಗಳ ಸುಸಜ್ಜಿತ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೀಲ ನಕ್ಷೆ ಸಿದ್ಧಪಡಿಸಿದ ಟ್ರಸ್ಟ್, ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿಗೆ 2015ರಲ್ಲಿ ₹ 1.99 ಕೋಟಿ ಅನುದಾನವನ್ನು ಮಾತ್ರ ಇಲಾಖೆಯಿಂದ ನೀಡಲಾಗಿತ್ತು. ಈ ಹಣವೂ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿತ್ತು. ಇದರಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಡಕಾಗಿತ್ತು.

₹ 8 ಕೋಟಿ ವೆಚ್ಚ ಮಾಡಲು ಸರ್ಕಾರದಿಂದ ಅನುಮೋದನೆ ಸಿಗದಿದ್ದರಿಂದ ಬಿಡುಗಡೆಯಾಗಿದ್ದ ಹಣವನ್ನು ಜಿಲ್ಲಾಧಿಕಾರಿಯ ಸಮ್ಮತಿ ಮೇರೆಗೆ ₹1.99 ಕೋಟಿಯನ್ನು ಕರ್ಣಾಟಕ ಬ್ಯಾಂಕ್‌ನಲ್ಲಿ ಟ್ರಸ್ಟ್ ಇರಿಸಿತ್ತು. ಬಡ್ಡಿ ಸೇರಿದ್ದರಿಂದಾಗಿ ಆ ಹಣ ಈಗ ಬೆಳೆಯುತ್ತಿದೆ. ಈ ಹಣವನ್ನು ಸರ್ಕಾರಕ್ಕೆ ಮರುಸಂದಾಯ ಮಾಡಿಸುವಂತೆ ಆರ್ಥಿಕ ಇಲಾಖೆ ಸೂಚಿಸಿದೆ ಎಂದು ಸಂಸ್ಕೃತಿ ಇಲಾಖೆಯ ಮೂಲಗಳು ತಿಳಿಸಿವೆ.

ಇಲಾಖೆ ಹೆಸರಿನಲ್ಲಿಯೇ ನೋಂದಣಿ: ಮಾಸ್ತಿ ಭವನ ನಿರ್ಮಾಣಕ್ಕೆ ಹಂಚಿಕೆಯಾದ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿಯೇಟ್ರಸ್ಟ್ ನೋಂದಣಿ ಮಾಡಿಸಿದೆ. ಹಂಚಿಕೆಯಾದ ಭೂಮಿಯನ್ನು ಸಮತಟ್ಟು ಮಾಡಿಸಿ, ಕೊಳವೆ ಬಾವಿ ಕೊರೆಯಿಸಲಾಗಿದೆ. ನಿವೇಶನಕ್ಕೆ ಬೇಲಿಯನ್ನೂ ವಾರ್ಷಿಕ ಕಾರ್ಯಚಟುವಟಿಕೆಗೆ ಹಂಚಿಕೆಯಾದ ಅನುದಾನದಿಂದಲೇ ಟ್ರಸ್ಟ್ ಮಾಡಿಸಿದೆ.

‘ಮಾಸ್ತಿ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಬೆಂಗಳೂರಿನಲ್ಲಿಯೇ ಕಳೆದಿದ್ದಾರೆ. ಇಲ್ಲಿಯೇ ಅವರ ಹೆಸರಿನಲ್ಲಿ ಭವನ ನಿರ್ಮಿಸಬೇಕೆಂಬ ಒತ್ತಾಯವಿತ್ತು. ಜಾಗ ಹಾಗೂ ಈ ಹಿಂದೆ ಬಿಡುಗಡೆ ಮಾಡಿದ ಅನುದಾನವಿದೆ. ಸರ್ಕಾರವುಆಡಳಿತಾತ್ಮಕ ಅನುಮೋದನೆ ನೀಡಿ, ಹಂತ ಹಂತವಾಗಿ ಅನುದಾನ ನೀಡಿದಲ್ಲಿ ಭವನ ನಿರ್ಮಾಣ ಸಾಕಾರವಾಗಲಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದರು.

‘ಗುರುವಿನ ಕೆಲಸ ಮುಗಿಸುವ ಆಸೆ’

‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ನನ್ನ ಗುರುಗಳು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಉಳಿದ ಸಾಹಿತಿಗಳ ಹೆಸರಿನಲ್ಲಿ ಭವನಗಳು ನಿರ್ಮಾಣವಾಗಿವೆ. ಗುರುವಿನ ಕೆಲಸ ಮುಗಿಸಿ ಹೋಗಬೇಕು ಎಂಬ ಆಸೆ ನನ್ನದಾಗಿದೆ. ‘ಮಾಸ್ತಿ ಕನ್ನಡದ ಆಸ್ತಿ’ ಎನ್ನುತ್ತಾರೆ. ಆದರೆ, ಸರ್ಕಾರ ಎಲ್ಲಿ ಬೆಲೆ ನೀಡಿದೆ? ಈಗಲಾದರೂ ಆಡಳಿತಾತ್ಮಕ ಅನುಮೋದನೆ ನೀಡಿ, ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು’ ಎಂದು ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌ ಆಗ್ರಹಿಸಿದರು.

ನೀಲ ನಕ್ಷೆಯಲ್ಲಿ ಏನಿದೆ?

ಮಾಸ್ತಿ ಭವನದ ನೀಲ ನಕ್ಷೆಯನ್ನು ಕೋಲಾರದ ನಿರ್ಮಿತಿ ಕೇಂದ್ರವು ಸಿದ್ಧಪಡಿಸಿತ್ತು. ತಳ ಮಹಡಿಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ, ನೆಲ ಮಹಡಿಯಲ್ಲಿ 300 ಆಸನಗಳ ಸಭಾಂಗಣ, ಕಚೇರಿ, ವಿಶ್ರಾಂತಿ ಸ್ಥಳ ಹಾಗೂ ಗ್ರಂಥಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಸಭಾ ಕೊಠಡಿ ಹಾಗೂ ಅತಿಥಿಗಳ ವಾಸಕ್ಕೆ ಕೊಠಡಿಗಳನ್ನು ನಿರ್ಮಿಸುವುದು ನೀಲ ನಕ್ಷೆಯಲ್ಲಿದೆ.

***

ಮಾಸ್ತಿ ಭವನ ನಿರ್ಮಾಣ ಶಾಶ್ವತವಾಗಿ ಉಳಿಯುವ ಕೆಲಸ. ಸರ್ಕಾರ ಆದ್ಯತೆ ನೀಡಿ, ಈ ಕೂಡಲೇ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು
। ಚಂದ್ರಶೇಖರ ಕಂಬಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ


ಮಾಸ್ತಿ ಭವನ ನಿರ್ಮಾಣ ಉತ್ತಮವಾದ ಕೆಲಸ. ಕಟ್ಟಡ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಿ, ಭವನ ನಿರ್ಮಾಣ ಮಾಡಬೇಕು
।ಹಂ.ಪ. ನಾಗರಾಜಯ್ಯ, ಸಾಹಿತಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭವನಗಳನ್ನು ಆದ್ಯತೆಯ ಮೇರೆಗೆ ನಿರ್ಮಾಣ ಮಾಡಬೇಕು. ನಾಡಿಗೆ ಮಾಸ್ತಿ ಅವರ ಕೊಡುಗೆ ಬೆಲೆಕಟ್ಟಲಾಗದು
।ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ

ಮಾಸ್ತಿ ಭವನದ ನಿರ್ಮಾಣ ಕಾಮಗಾರಿ ಇಷ್ಟು ವರ್ಷಗಳಾದರೂ ಏಕೆ ಸಾಕಾರವಾಗಿಲ್ಲ ಎನ್ನುವುದನ್ನು ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು
।ಎಸ್. ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT