ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಬ್ಲ್ಯಾಕ್‌ಮೇಲ್‌: ‘ಆನ್‌ಲೈನ್‌ ವರ’ ಬಂಧನ

Last Updated 20 ಜನವರಿ 2022, 19:05 IST
ಅಕ್ಷರ ಗಾತ್ರ

ಬೆಂಗಳೂರು:ವೈವಾಹಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗಿನ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರ ವ್ಯಾಪ್ತಿಯ ಶಿವನಗರ ನಿವಾಸಿ ಎಸ್‌.ವಿಜಯಕುಮಾರ್ ಯಾನೆ ವಿಜಿ (40) ಬಂಧಿತ.

‘ದೂರುದಾರ ಮಹಿಳೆಯು ಕನ್ನಡ ಮ್ಯಾಟ್ರಿಮೋನಿ ಡಾಟ್‌ ಕಾಂ ಜಾಲತಾಣದಲ್ಲಿ ಪ್ರೊಫೈಲ್‌ ಸೃಷ್ಟಿಸಿದ್ದರು. ಆರೋಪಿ ಕೂಡ ಈ ಜಾಲತಾಣದಲ್ಲಿ ಪ್ರೊಫೈಲ್ ಹೊಂದಿದ್ದ. ಅಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಆತ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಇಬ್ಬರು ಆಗಾಗ ಭೇಟಿ ಮಾಡುತ್ತಿದ್ದರು. ಈ ವೇಳೆ ಮಹಿಳೆಯೊಂದಿಗೆ ಸಲುಗೆಯಿಂದ ವರ್ತಿಸಿದ್ದ ಆತ ಆಪ್ತ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಕೆಲ ದಿನಗಳ ನಂತರ ಆರೋಪಿಯು ₹50 ಸಾವಿರ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ತಮ್ಮಿಬ್ಬರ ಖಾಸಗಿ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಹಣ ನೀಡಲು ಮಹಿಳೆ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಆತ ಮಹಿಳೆಯ ಹೆಸರಿನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ನಕಲಿ ಖಾತೆಗಳನ್ನು ಸೃಷ್ಟಿಸಿದ್ದ. ತಮ್ಮಿಬ್ಬರ ಚಿತ್ರಗಳನ್ನು ಪ್ರೊಫೈಲ್‌ಗೆ ಹಾಕಿದ್ದ. ಆ ಖಾತೆಗಳ ಮೂಲಕ ಮಹಿಳೆಯ ಸ್ನೇಹಿತರು ಹಾಗೂ ಸಂಬಂಧಿಕರಿಗೆ ‘ಫ್ರೆಂಡ್‌ ರಿಕ್ವೆಸ್ಟ್‌’ ಕಳುಹಿಸಿದ್ದ’ ಎಂದು ಮಾಹಿತಿ ನೀಡಿದ್ದಾರೆ.

‘ಆತನ ವರ್ತನೆಯಿಂದ ಹೆದರಿದ್ದ ಮಹಿಳೆ ‘ಫೋನ್‌ ಪೇ’ ಮೂಲಕ ಆರೋಪಿಯ ಖಾತೆಗೆ ₹50 ಸಾವಿರ ಹಣ ವರ್ಗಾವಣೆ ಮಾಡಿದ್ದರು. ತನ್ನ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸೃಷ್ಟಿಸಿರುವ ನಕಲಿ ಖಾತೆಗಳನ್ನೆಲ್ಲಾ ‘ಡಿಲೀಟ್‌’ ಮಾಡುವಂತೆ ಸೂಚಿಸಿದ್ದರು. ಹೀಗಿದ್ದರೂ ಆತ ಹಣಕ್ಕಾಗಿ ಪೀಡಿಸುವುದನ್ನು ಮುಂದುವರಿಸಿದ್ದ. ಇನ್‌ಸ್ಟಾಗ್ರಾಮ್‌ ಖಾತೆಗಳಿಗೆ ಇನ್ನಷ್ಟು ಚಿತ್ರಗಳನ್ನು ಹಾಕುವುದಾಗಿಯೂ ಹೆದರಿಸಿದ್ದ. ಇದರಿಂದ ನೊಂದಿದ್ದ ಮಹಿಳೆ ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ವಿವರಿಸಿದ್ದಾರೆ.

‘ಆರೋಪಿಯು ನಗರದ ವಿದ್ಯಾರಣ್ಯಪುರದಲ್ಲಿ ಇರುವ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಇದೇ 18ರಂದು ಆತನನ್ನು ಬಂಧಿಸಲಾಯಿತು. ಆತನಿಂದ ಎರಡು ಮೊಬೈಲ್‌ ಹಾಗೂ ಒಂದು ಡಾಂಗಲ್‌ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT