ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತೆಕ್ಕೆಗೆ ಬೆಳಗಾವಿ ಪಾಲಿಕೆ ಅಧಿಕಾರ

ಶೋಭಾ ಸೋಮನಾಚೆ ಮೇಯರ್‌, ರೇಷ್ಮಾ ಪಾಟೀಲ ಉಪಮೇಯರ್‌ ಆಗಿ ಆಯ್ಕೆ
Last Updated 6 ಫೆಬ್ರುವರಿ 2023, 16:32 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಂಪೂರ್ಣ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಹೊಸ ಇತಿಹಾಸ ಬರೆದಿದೆ. ಗಡಿ ತಂಟೆ– ಭಾಷಾ ವಿವಾದಗಳಿಂದಾಗಿ ಯಾವಾಗಲೂ ಸುದ್ದಿಯಲ್ಲಿ ಇರುವ ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ.

ಮೇಯರ್‌ ಆಗಿ ಶೋಭಾ ಸೋಮನಾಚೆ ಅವಿರೋಧವಾಗಿ ಆಯ್ಕೆಯಾದರು. ಉಪ ಮೇಯರ್‌ ಆಗಿ ರೇಷ್ಮಾ ಪಾಟೀಲ ಅವರು ವೈಶಾಲಿ ಭಾತಖಾಂಡೆ ವಿರುದ್ಧ ಜಯ ಸಾಧಿಸಿದರು. ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಪ್ರಥಮಪ್ರಜೆಯ ಗೌನು ಧರಿಸಿದ ಶೋಭಾ ಅವರು ನಮಸ್ಕರಿಸಿ ಕುರ್ಚಿ ಮೇಲೆ ಕುಳಿತು ಪುಸ್ತಕದಲ್ಲಿ ಸಹಿ ಮಾಡಿದರು. ಅವರ ಪಕ್ಕದಲ್ಲೇ ರೇಷ್ಮಾ ಕೂಡ ಕುಳಿತರು. ಬಿಜೆಪಿ ಸದಸ್ಯರು ಜೈಕಾರ ಮೊಳಗಿಸಿದರು. ಎಲ್ಲರೂ ಸೇರಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಪಾಲಿಕೆ ಮುಂದೆ ಸೇರಿದ ಅವರ ಬೆಂಬಲಿಗರಿಗೆ ಕೈ ಬೀಸಿದರು. ನಿಷೇಧಾಜ್ಞೆ ವಿಧಿಸಿದ ಪ್ರದೇಶದಿಂದ ಆಚೆ ಬರುತ್ತಿದ್ದಂತೆಯೇ ಅಭಿಮಾನಿಗಳು ಮಾಲೆ ಹಾಕಿ ಜೈಕಾರ ಕೂಗಿದರು.

ಅವಿರೋಧ ಆಯ್ಕೆ: ಪಾಲಿಕೆಯಲ್ಲಿ ದೊಡ್ಡ ಪಕ್ಷವಾದ ಬಿಜೆಪಿಯಲ್ಲಿ 16 ಮಹಿಳಾ ಸದಸ್ಯರಿದ್ದಾರೆ. ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಎಲ್ಲರೂ ಆಕಾಂಕ್ಷಿಗಳಾಗಿದ್ದರು. ಆದರೆ, ಬಿಜೆಪಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾಣಾ ಅವರ ಯತ್ನ ಯಾರಲ್ಲೂ ಭಿನ್ನಮತ ಮೂಡದಂತೆ ಮಾಡಿತು.

ಮುಂಚೂಣಿ ಆಕಾಂಕ್ಷಿಗಳಾಗಿದ್ದ ವಾಣಿ ವಿಲಾಸ ಜೋಶಿ ಹಾಗೂ ಇತರ ಮೂವರು ಸದಸ್ಯೆಯರನ್ನು ಕೊನೆ ಕ್ಷಣದಲ್ಲಿ ಮನವೊಲಿಸಿದರು. ಹೀಗಾಗಿ, ಮೇಯರ್ ಸ್ಥಾನ ಅವಿರೋಧ ಆಯ್ಕೆ ಸಾಧ್ಯವಾಯಿತು. ಹಿಂದುಳಿದ ವರ್ಗ ಬಿ– ಮಹಿಳೆಗೆ ಮೀಸಲಾಗಿದ್ದ ಉಪಮೇಯರ್‌ ಸ್ಥಾನಕ್ಕೂ ಬಿಜೆಪಿಯಲ್ಲಿ ರೇಷ್ಮಾ ಒಬ್ಬರೇ ನಾಮಪತ್ರ ಸಲ್ಲಿಸಿದರು. ಅವರ ವಿರುದ್ಧ ಎಂಇಎಸ್‌ ಬೆಂಬಲಿತ ವೈಶಾಲಿ ಭಾತಖಾಂತೆ ನಿಂತಿದ್ದರಿಂದ ಚುನಾವಣೆ ನಡೆಯಿತು.

ನಾಲ್ಕೂವರೆ ವರ್ಷಗಳ ಬಳಿಕ: ಬೆಳಗಾವಿ ಪಾಲಿಕೆಯ 20ನೇ ಅವಧಿ 2019ಕ್ಕೆ ಮುಗಿದಿದೆ. ಕೋವಿಡ್‌ ಹಾಗೂ ಮತ್ತಿತರ ಕಾರಣ ಎರಡು ವರ್ಷ ಚುನಾವಣೆ ಘೋಷಣೆ ಆಗಲಿಲ್ಲ. 2021 ಸೆಪ್ಟೆಂಬರ್‌ 3ರಂದು 21ನೇ ಅವಧಿಯ ಚುನಾವಣೆ ನಡೆಯಿತು. ಆದರೆ, ಮೀಸಲಾತಿ ಗೊಂದಲ ಕೋರ್ಟ್‌ ಮೆಟ್ಟಿಲೇರಿದ ಕಾರಣ ಒಂದೂವರೆ ವರ್ಷ ಮೇಯರ್‌ ಆಯ್ಕೆ ಸಾಧ್ಯವಾಗಲಿಲ್ಲ.

ಹೀಗಾಗಿ, ನಾಲ್ಕೂವರೆ ವರ್ಷದ ಬಳಿಕ ಪಾಲಿಕೆಯಲ್ಲಿ ಪ್ರಜೆಗಳ ಆಡಳಿತ ಆರಂಭವಾಗಿದೆ. ಸದಸ್ಯರು ಈಗಾಗಲೇ ಒಂದೂವರೆ ವರ್ಷ ಸವೆಸಿದ್ದರೂ ಅವರ ಅಧಿಕಾರ ಅವಧಿ ಫೆ. 6ರಿಂದ ಐದು ವರ್ಷಗಳವರೆಗೆ ಇರಲಿದೆ.

*

65ರಲ್ಲಿ 46 ಮತ ಚಲಾವಣೆ

58 ವಾರ್ಡ್‌ ಸದಸ್ಯರು, ಶಾಸಕರು, ಸಂಸದರು ಸೇರಿ ಒಟ್ಟು 65 ಮತಗಳಿವೆ. ಇವುಗಳ ಪೈಕಿ 46 ಮತಗಳು ಚಲಾವಣೆಯಾದವು. 13 ಮಂದಿ ತಟಸ್ಥರಾಗಿದ್ದು, 6 ಮಂದಿ ಗೈರಾದರು. 42 ಮಂದಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದರು. ನಾಲ್ವರು ಎಂಇಎಸ್‌ ಬೆಂಬಲಿತರಿಗೆ ಕೈ ಎತ್ತಿದರು.

ಬಿಜೆಪಿಯಲ್ಲಿ 39 ಮತಗಳಿದ್ದರೂ 42 ಮತಗಳು ಚಲಾವಣೆಯಾದವು. ಮೂವರು ಪಕ್ಷೇತರರೂ ಬಿಜೆಪಿ ಪರ ಕೈ ಎತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT