ಬುಧವಾರ, ಸೆಪ್ಟೆಂಬರ್ 28, 2022
28 °C

ಬಿಜೆಪಿಯವರಿಗೆ ಪ್ರೀತಿ ಇದ್ದರೆ ಬಿಎಸ್‌ವೈ ಸಿಎಂ ಎಂದು ಘೋಷಿಸಲಿ: ಎಂ.ಬಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯಡಿಯೂರಪ್ಪ ಅವರ ಮೇಲೆ ಬಿಜೆಪಿಯವರಿಗೆ ಪ್ರೀತಿ ಇದ್ದರೆ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲಿ’ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘75 ವರ್ಷ ತುಂಬಿದ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದರು. ಅವರ ಬಗ್ಗೆ ಗೌರವ ಇದ್ದಿದ್ದರೆ ಆ ಸ್ಥಾನದಿಂದ ಯಾಕೆ ಇಳಿಸುತ್ತಿದ್ದರು? ಈಗ ಸಂಸದೀಯ ಮಂಡಳಿಯಲ್ಲಿ ಸ್ಥಾನ ಕೊಟ್ಟಿದ್ದಾರೆ. ಯಡಿಯೂರಪ್ಪ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಆಗುವ ಅವಕಾಶವೂ ಇಲ್ಲ’ ಎಂದು ಭವಿಷ್ಯ ನುಡಿದರು.

‘ಯಡಿಯೂರಪ್ಪನವರು ಹಿರಿಯರು. ಅವರಿಗೆ ಒಳ್ಳೆಯದಾಗಲಿ. ಆದರೆ, ಯಡಿಯೂರಪ್ಪ ಅವರ ಮೇಲೆ ಬಿಜೆಪಿಯವರಿಗೆ ಈಗ ವಿಶೇಷ ಪ್ರೀತಿ ಬಂದಿದೆ’ ಎಂದು ವ್ಯಂಗ್ಯವಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ, ಯಡಿಯೂರಪ್ಪ ಬಗ್ಗೆ ಬಿಜೆಪಿಯವರಿಗೆ ಇನ್ನಿಲ್ಲದ‌ ಪ್ರೀತಿ ಬಂದಿದೆ’ ಎಂದೂ ಅಭಿಪ್ರಾಯಪಟ್ಟರು.

‘ಸಿದ್ದರಾಮೋತ್ಸವದಿಂದ ಬಿಜೆಪಿ ನೆಲ ಕಚ್ಚಿದೆ. ಬಿಜೆಪಿ ಐಸಿಯುನಲ್ಲಿದೆ. ಹೀಗಾಗಿ, ಯಡಿಯೂರಪ್ಪ ಮೇಲೆ ಪ್ರೀತಿ ತೋರಿಸಿದ್ದಾರೆ ಅಷ್ಟೇ. ಮುಂದಿನ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನೇಮಕ‌ ಮಾಡಿದ್ದಾರೆ’ ಎಂದರು.

ಲಿಂಗಾಯತ ಮತ ಸೆಳೆಯಲು ಅಲ್ಲ: ‘ಇದೇ 19ರಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಹಾಗೆಂದು, ಲಿಂಗಾಯತ ಮತ ಸೆಳೆಯಲು ನಾನು ಈ ಪ್ರವಾಸ ಮಾಡುತ್ತಿಲ್ಲ. ನಮಗೆ ಎಲ್ಲ ಜಾತಿಯವರೂ ಬಹಳ ಮುಖ್ಯ. ಪ್ರವಾಸದ ಸಂದರ್ಭದಲ್ಲಿ ಎಲ್ಲ ಸಮುದಾಯಗಳ ಮಠಗಳಿಗೂ ಭೇಟಿ ನೀಡುತ್ತೇನೆ. ಲಿಂಗಾಯತ ಸಮುದಾಯದ ಜನರು ಅಷ್ಟೇನೂ ಮೂರ್ಖರಲ್ಲ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು