ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ: ಪುರಸ್ಕೃತರಲ್ಲಿ ಪ್ರಜಾವಾಣಿಯ 11 ಪತ್ರಕರ್ತರು

Last Updated 13 ಮಾರ್ಚ್ 2023, 23:33 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಧ್ಯಮ ಅಕಾಡೆಮಿಯು ಪ್ರಶಸ್ತಿ ವಿತರಣೆಗೆ ಸೀಮಿತವಾಗಿರದೇ ಹೊಸದಾಗಿ ಉದ್ಯೋಗಕ್ಕೆ ಸೇರಿದ ಪತ್ರಕರ್ತರಿಗೆ ತರಬೇತಿ, ಕ್ಷೇತ್ರ ಅಧ್ಯಯನ, ಸಂಶೋಧನಾ ಕಾರ್ಯಕ್ಕೂ ಒತ್ತು ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.

ನಗರದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ಕು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭ (2019ರಿಂದ 2022) ಹಾಗೂ ಟಿಎಸ್ಸಾರ್‌ ಸ್ಮಾರಕ, ಮೊಹರೆ ಹಣಮಂತರಾಯ, ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ಸುದ್ದಿಗಳನ್ನೂ ಜನರಿಗೆ ತಲುಪಿಸುವ ಕೆಲಸ ಅಕಾಡೆಮಿಯಿಂದ ಆಗಬೇಕಿದೆ. ವಿಭಿನ್ನ ಆಯಾಮದಲ್ಲಿ ಕಾರ್ಯ ನಿರ್ವಹಿಸಲಿ. ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಹೆಚ್ಚು ಪ್ರೋತ್ಸಾಹ, ಬೆಂಬಲ ಸಿಗಬೇಕಿದೆ’ ಎಂದರು.

‘ಪತ್ರಿಕೋದ್ಯಮ ವಿಶ್ವದ ಅತ್ಯಂತ ಹಳೆಯ ವೃತ್ತಿ. ದೇಶದ ಬೆಳವಣಿಗೆಯಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸಿದೆ. 1, 2ನೇ ವಿಶ್ವ ಯುದ್ಧದ ಬಳಿಕ ಪತ್ರಿಕೋದ್ಯಮದ ಸತ್ವ, ನಿರೂಪಣೆ ಹಾಗೂ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಗೆ ಒಡ್ಡಿಕೊಂಡಿತು’ ಎಂದು ಅವರು ಹೇಳಿದರು.

‘ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯ ಪತ್ರಿಕೋದ್ಯಮದ ಪಾತ್ರ ಮಹತ್ವದ್ದು. ಅಂದು ಕೈಬರಹದಲ್ಲಿ ಪತ್ರಿಕೆಗಳು ಹೊರಬರುತ್ತಿದ್ದವು. ಸ್ವಾತಂತ್ರ್ಯಪೂರ್ವದ ಪತ್ರಿಕೋದ್ಯಮ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆದರೆ ಉತ್ತಮ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರವಾಗಿ ಉಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ಧಾರೆ. ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸಿ, ವೃತ್ತಿಧರ್ಮ ಗಟ್ಟಿಗೊಳಿಸಲಿದೆ’ ಎಂದು ಹೇಳಿದರು.

ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿ ಸ್ವೀಕರಿಸಿದ ವಿಆರ್‌ಎಲ್‌ ಮೀಡಿಯಾದ ಮುಖ್ಯಸ್ಥ ವಿಜಯ ಸಂಕೇಶ್ವರ ಅವರು ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದರು. ಪ್ರಶಸ್ತಿ ಮೊತ್ತ ₹ 50,000ಕ್ಕೆ ತಮ್ಮ ವೈಯಕ್ತಿಕ ₹ 1.50 ಲಕ್ಷ ಸೇರಿಸಿ ಹೊಸದಾಗಿ ದತ್ತಿ ಪ್ರಶಸ್ತಿ ಸ್ಥಾಪಿಸುವುದಾಗಿ ತಿಳಿಸಿದರು. ‌

ಕಂದಾಯ ಸಚಿವ ಆರ್‌.ಅಶೋಕ, ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌, ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಇದ್ದರು.

‘ಆರೋಗ್ಯಕರ ಟೀಕೆ ಇರಲಿ’
‘ರಾಜಕೀಯ ವರದಿಗಳನ್ನು ಬಿಟ್ಟು ಸಿನಿಮಾ, ಕ್ರೀಡಾ ವರದಿಗಳ ಮೂಲಕವೇ ಪತ್ರಿಕೆಗಳನ್ನು ಹೊರತರಲು ಸಾಧ್ಯವಿಲ್ಲ. ರಾಜಕಾರಣಿಗಳಿಲ್ಲದೇ ಪತ್ರಿಕೆಗಳಿಲ್ಲ. ಹಾಗೆಯೇ ಪತ್ರಿಕೆಗಳಿಲ್ಲದೆ ರಾಜಕಾರಣಿಗಳು ಇರಲೂ ಆಗದು. ರಾಜಕಾರಣಿಗಳು ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧ ಇದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ರಾಜಕಾರಣಿ ಹೇಳಿಕೆಯನ್ನು ಪದೇ ಪದೇ ತೋರಿಸುತ್ತಲೇ ಮಾಧ್ಯಮಗಳು ಜಾಲಾಡಿಸುತ್ತಿವೆ. ಒಳ್ಳೆಯ ಕೆಲಸ ಮಾಡಿದಾಗ ಬೆನ್ನುತಟ್ಟುವ, ಪ್ರೋತ್ಸಾಹಿಸುವ ಕೆಲಸವನ್ನೂ ಮಾಡಬೇಕಿದೆ. ರಾಜಕಾರಣಿಗಳು ಹಾಗೂ ಪತ್ರಕರ್ತರ ನಡುವಿನ ತಿಕ್ಕಾಟದಿಂದ ಜನರಿಗೆ ಸಮಸ್ಯೆ ಆಗಬಾರದು. ಟೀಕೆಗಳು ಆರೋಗ್ಯಕರವಾಗಿ ಇರಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT