ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಆಮ್ಲಜನಕ: ನೆರೆಯ ಜಿಲ್ಲೆಗಳೇ ಆಧಾರ

ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಿಂದ ಮಾತ್ರವೇ ಅಗತ್ಯದ ಆಮ್ಲಜನಕ ಪೂರೈಕೆ
Last Updated 4 ಮೇ 2021, 4:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಳ್ಳಾರಿಯಲ್ಲಿ ನಾಲ್ಕು ಆಮ್ಲಜನಕ ಉತ್ಪಾದನಾ ಘಟಕಗಳಿದ್ದು ಧಾರವಾಡ ಜಿಲ್ಲೆಯಲ್ಲಿ ಮೂರು ಆಮ್ಲಜನಕ ಮರುಪೂರಣ ಘಟಕಗಳಿವೆ. ನೆರೆಯ ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ವಿಜಯಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗಳವಿವಿಧ ಆಸ್ಪತ್ರೆಗೆ ಅಗತ್ಯದ ಆಮ್ಲಜನಕ ಟ್ಯಾಂಕರ್‌ಗಳಲ್ಲಿ ಪ್ರತಿದಿನ ಇಲ್ಲಿಂದಲೇ ಪೂರೈಕೆಯಾಗುತ್ತಿವೆ.

ಕೆಲವೆಡೆ ಆಮ್ಲಜನಕ ಸಂಗ್ರಹಣಾ ಟ್ಯಾಂಕ್‌ ಇದ್ದರೆ, ಉಳಿದಂತೆ ಜಂಬೋ ಸಿಲಿಂಡರ್ ಗಳನ್ನು ಜಿಲ್ಲಾಡಳಿತ ಸಂಗ್ರಹಿಸಿಟ್ಟಿದೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆಮ್ಲಜನಕ ಉತ್ಪಾದಿಸುವ ನಾಲ್ಕು (ಪ್ರಾಕ್ಸ್‌ ಏರ್‌, ಬೈಲಾಕ್ಸ್‌, ಏರ್‌ ವಾಟರ್‌ ಸರ್ವಿಸ್‌ ಮತ್ತು ಜೆಎಸ್‌ಡಬ್ಲ್ಯು ಗ್ಯಾಸಸ್) ಘಟಕಗಳಿದ್ದು, ಪ್ರತಿ ದಿನ ಸರಾಸರಿ 1,000 ಟನ್‌ ಆಮ್ಲಜನಕ ಉತ್ಪಾದಿಸಲಾಗುತ್ತಿದೆ. ಜಿಲ್ಲೆಯಲ್ಲಿ ದಿನವೂ 40 ಕಿಲೋ ಲೀಟರ್‌ ಬಳಕೆಯಾಗುತ್ತಿದ್ದು, ಉಳಿದವನ್ನು ಮಂಗಳೂರಿನ ವೆನ್ಲಾಕ್‌, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಿಗೆ ರವಾನಿಸಲಾಗುತ್ತಿದೆ. ಸದ್ಯ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕದ ದಾಸ್ತಾನಿದೆ. ಜಿಂದಾಲ್ ಆಮ್ಲಜನಕ ಘಟಕದ ಬಳಿಯೇ ಆಮ್ಲಜನಕದ ಸೌಲಭ್ಯ ಇರುವ 1,000 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಕರ್ನಾಟಕ ಗ್ಯಾಸಸ್, ಪ್ರಾಕ್ಸಿ ಏರ್ ಹಾಗೂ ಸದರನ್ ಗ್ಯಾಸ್ ಸೇರಿ ಮೂರು ಕಂಪನಿಗಳಿದ್ದು ಇವುಗಳಿಗೆ ತೋರಣಗಲ್‌ನಿಂದ ದ್ರವರೂಪದ ಆಮ್ಲಜನಕ ಪೂರೈಕೆ ಆಗುತ್ತದೆ. ಅವುಗಳನ್ನು ವಿವಿಧ ಆಸ್ಪತ್ರೆಗೆ ನೀಡಲಾಗುತ್ತಿದೆ.

ಹುಬ್ಬಳ್ಳಿಯ ಕಿಮ್‌ನಂತಹ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳೇ ಇರುವುದರಿಂದ ಅಲ್ಲಿಗೆ ನೇರವಾಗಿ ದ್ರವರೂಪದ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಇಂತಹ ಘಟಕಗಳು ಇಲ್ಲದ ಆಸ್ಪತ್ರೆಗಳಿಗೆ ಸಿಲಿಂಡರ್ ಭರ್ತಿ ಮಾಡಿ ನೀಡಲಾಗುತ್ತಿದೆ. ಈ ಮೂರು ಆಮ್ಲಜನಕ ಮರುಪೂರಣ ಘಟಕಗಳು ನಿತ್ಯ ತಲಾ 25 ಟನ್ ಆಮ್ಲಜನಕ ಮರುಪೂರಣ ಮಾಡುತ್ತಿವೆ. ಉಳಿದಂತೆ ಇಲ್ಲಿಂದ ಗದಗ, ಬೆಳಗಾವಿ ಮತ್ತು ವಿಜಯಪುರಕ್ಕೆ ಪೂರೈಕೆ ಆಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ನಿತ್ಯ 40 ಟನ್ ವೈದ್ಯಕೀಯ ಆಮ್ಲಜನಕ ಅಗತ್ಯವಿದೆ.ಹೆಚ್ಚುವರಿಯಾಗಿ 1,500 ಜಂಬೊ ಸಿಲಿಂಡರ್‌ಗಳನ್ನು ಜಿಲ್ಲಾಡಳಿತ ಸಂಗ್ರಹಿಸಿಟ್ಟಿದೆ. ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಮಾತ್ರ ಇವುಗಳನ್ನು ಬಳಸುವ ಯೋಚನೆ ಜಿಲ್ಲಾಡಳಿತದ್ದು.

ಬೆಳಗಾವಿಯಲ್ಲಿ 2–3 ದಿನಗಳಷ್ಟೇ ಸಾಕು
ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 2–3 ದಿನಗಳಿಗಷ್ಟೇ ಸಾಕಾಗಬಹುದಾದಷ್ಟು ಆಮ್ಲಜನಕ ಇದ್ದು, ನಿಯಮಿತವಾಗಿ ಪೂರೈಕೆ ಆಗದಿದ್ದಲ್ಲಿ ಕೊರತೆ ಎದುರಾಗುವ ಸಾಧ್ಯತೆಯಿದೆ. ಧಾರವಾಡ ಹಾಗೂ ಬಳ್ಳಾರಿಯಿಂದ ಬರುವ ಆಮ್ಲಜನಕ ಟ್ಯಾಂಕರ್‌ಗಳನ್ನು ಇಲ್ಲಿನ ಬಿಮ್ಸ್‌ ಆಸ್ಪತ್ರೆಯ ಘಟಕದಲ್ಲಿ ತುಂಬಿಟ್ಟುಕೊಂಡು, ಬೇಡಿಕೆ ಇರುವ ಕಡೆ ಹಂಚಿಕೆ ಮಾಡಲಾಗುತ್ತಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಹಿನ್ನೆಲೆಯಲ್ಲಿ ಐವರು ರೋಗಿಗಳನ್ನು ಭಾನುವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ವರದಿಯಾಗಿದೆ.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನಿತ್ಯ 700 ಆಕ್ಸಿಜನ್‌ ಸಿಲಿಂಡರ್‌ಗಳಿಗೆ ಬೇಡಿಕೆ ಇದೆ. ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳಿರುವ ಕಾರಣ, ಕೊಲ್ಹಾಪುರದಿಂದ ಕರ್ನಾಟಕಕ್ಕೆ ಅ ಪೂರೈಕೆಗೆ ತಡೆ ನೀಡಲಾಗಿದೆ. ಇದರಿಂದ ಶೇ 20ರಷ್ಟು ಕೊರತೆ ಉಂಟಾಗಿದೆ. ಬಳ್ಳಾರಿ–ಧಾರವಾಡಗಳಿಂದ ತರಿಸಿಕೊಳ್ಳುವುದಕ್ಕೆ ಆಗಾಗ ಟ್ಯಾಂಕರ್‌ಗಳ ಕೊರತೆ ಎದುರಾಗುತ್ತಿದೆ.

ಬಾಗಲಕೋಟೆಗೂ ಬೇಕು...
ಬಾಗಲಕೋಟೆ ಜಿಲ್ಲೆಯಲ್ಲಿ ನಿತ್ಯ 10 ಕಿಲೋ ಲೀಟರ್ ಆಮ್ಲಜನಕಕ್ಕೆ ಬೇಡಿಕೆಯಿದೆ. ಬಳ್ಳಾರಿಯಿಂದ ನಿತ್ಯ ಟ್ಯಾಂಕರ್‌ಗಳಲ್ಲಿ ಸರಬರಾಜು ಆಗುತ್ತಿದ್ದು ಸದ್ಯ ಕೊರತೆಯಿಲ್ಲ.

ಆಮ್ಲಜನಕ ಸಂಗ್ರಹಕ್ಕೆ ನವನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 6 ಕಿಲೋ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಅದರಿಂದ ಜಿಲ್ಲಾ ಆಸ್ಪತ್ರೆಯ 250 ಹಾಸಿಗೆಗಳ ಆಸ್ಪತ್ರೆಗೆ ನಿರಂತರವಾಗಿ ಪೂರೈಸಲಾಗುತ್ತಿದೆ. ಒಮ್ಮೆ ಟ್ಯಾಂಕ್ ತುಂಬಿದರೆ ಮೂರು ದಿನಗಳ ಬೇಡಿಕೆ ಈಡೇರಿಸುತ್ತದೆ. ಬಿ.ವಿ.ವಿ ಸಂಘದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯಲ್ಲಿ 20 ಕಿಲೋ ಲೀಟರ್ ಸಾಮರ್ಥ್ಯದ ಸಂಗ್ರಹಗಾರ ಇದೆ.

ಉಳಿದ ಜಿಲ್ಲೆಗಳಲ್ಲಿ ಸಮಸ್ಯೆ ಇಲ್ಲ...
ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ ಪ್ರತಿದಿನ 16 ಟನ್‌ ಆಮ್ಲಜನಕದ ಅಗತ್ಯವಿದೆ. ಬೇಡಿಕೆಯಷ್ಟು ಆಮ್ಲಜನಕವನ್ನು ಬಳ್ಳಾರಿ ಜಿಂದಾಲ್‌ನಿಂದ ಹಾಗೂ ಧಾರವಾಡದ ಕರ್ನಾಟಕ ಇಂಡಸ್ಟ್ರಿಯಲ್‌ ಗ್ಯಾಸ್ ಏಜೆನ್ಸಿಯಿಂದ ಭರ್ತಿ ಮಾಡಲಾಗುತ್ತಿದೆ.

ಹಾವೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಿರುವ 6,000 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ನಲ್ಲಿ 1,000 ಲೀಟರ್‌ ‘ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌’ ಲಭ್ಯವಿದೆ. ಹುಲಕೋಟಿಯ ಗದಗ ಆಕ್ಸಿಜನ್‌ ಸಂಸ್ಥೆ, ಹರಿಹರ ಮತ್ತು ಹುಬ್ಬಳ್ಳಿಯಲ್ಲಿರುವ ದಿ ಸದರನ್‌ ಗ್ಯಾಸ್‌ ಸಂಸ್ಥೆಯಿಂದ ಖರೀದಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 168 ಜಂಬೊ ಸಿಲಿಂಡರ್‌ ಮತ್ತು 64 ಸಣ್ಣ ಸಿಲಿಂಡರ್‌ಗಳು ಲಭ್ಯವಿವೆ.

ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 13 ಕಿಲೋ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಸಂಗ್ರಹಣಾ ಟ್ಯಾಂಕ್‌ ಇದೆ. ತಾಲ್ಲೂಕು ಆಸ್ಪತ್ರೆಗಳಿಗೆ ಪ್ರತಿ ನಿತ್ಯ 69 ಜಂಬೊ ಸಿಲಿಂಡರ್‌ ಆಮ್ಲಜನಕದ ಬೇಡಿಕೆ ಇದೆ. ಪ್ರಸ್ತುತ ಅಗತ್ಯವಿರುವಷ್ಟು ಆಮ್ಲಜನಕ ದೊರೆಯುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬೆಟ್ಕುಳಿಯಲ್ಲಿರುವ ಏಜೆನ್ಸಿಯ ಟ್ಯಾಂಕ್‌ನಲ್ಲಿ 2,000 ಲೀಟರ್ ದ್ರವೀಕೃತ ಆಮ್ಲಜನಕದ ಸಂಗ್ರಹವಿದೆ. ಬಳ್ಳಾರಿಯಿಂದ 13 ಕಿಲೋ ಲೀಟರ್‌ಗಳಷ್ಟು ದ್ರವೀಕೃತ ಆಮ್ಲಜನಕ ಟ್ಯಾಂಕರ್‌ನಲ್ಲಿ ಪೂರೈಕೆಯಾಗುತ್ತಿದೆ. ದಿನವೊಂದಕ್ಕೆ ಸರಾಸರಿ 400 ಜಂಬೊ ಸಿಲಿಂಡರ್‌ಗಳನ್ನು ಆಸ್ಪತ್ರೆಗಳಿಗೆ ಭರ್ತಿ ಮಾಡಿ ಕಳುಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT