ಗುರುವಾರ , ಸೆಪ್ಟೆಂಬರ್ 16, 2021
24 °C
ಧಾರವಾಡ ಜಿ.ಪಂ. ಸದಸ್ಯರಾಗಿದ್ದ ಯೋಗೇಶ್‌ಗೌಡ ಗೌಡರ ಕೊಲೆ ಪ್ರಕರಣ

ಸೋಮಶೇಖರ್‌ ನ್ಯಾಮಗೌಡ ವೈದ್ಯಕೀಯ ವರದಿ ಸಲ್ಲಿಸಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿದ್ದ ಯೋಗೇಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆಎಎಸ್‌ ಅಧಿಕಾರಿ ಸೋಮಶೇಖರ್‌ ನ್ಯಾಮಗೌಡ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಧಾರವಾಡ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಚುನಾಯಿತ ಪ್ರತಿನಿಧಿಗಳ ಪ್ರಕರಣದ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಯೋಗೇಶ್‌ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಸೋಮಶೇಖರ್‌ ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಜುಲೈ 8ರಂದು ಬಂಧಿಸಿದ್ದರು. ಜುಲೈ 9ರಂದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವೈದ್ಯಕೀಯ ಕಾರಣಗಳ ಆಧಾರದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಅಧಿಕಾರಿ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದ್ದಾರೆ.

‘ಅರ್ಜಿದಾರರು 2015ರಿಂದಲೂ ಹೃದ್ರೋಗದಿಂದ ಬಳಲುತ್ತಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆ ಮತ್ತು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಬಳಿಕ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲ್ಲ. ತೀವ್ರವಾಗಿ ಅಸ್ವಸ್ಥರಾಗಿದ್ದ ಸೋಮಶೇಖರ್‌ ಅವರನ್ನು ಜುಲೈ 28ರಂದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂಬುದಾಗಿ ವೈದ್ಯರು ಶಿಫಾರಸು ಮಾಡಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಜಾಮೀನು ಅರ್ಜಿ ವಿಚಾರಣೆಯ ಭಾಗವಾಗಿ ಅರ್ಜಿದಾರರ ಆರೋಗ್ಯದ ಸ್ಥಿತಿ ಕುರಿತು ವೈದ್ಯಕೀಯ ವರದಿ ಪಡೆಯುವಂತೆ ಅಧಿಕಾರಿ ಪರ ವಕೀಲರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಸಿಬಿಐ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಈ ಬೇಡಿಕೆಯನ್ನು ವಿರೋಧಿಸಿ, ಆಕ್ಷೇಪಣೆ ಸಲ್ಲಿಸಿದ್ದರು.

ಈ ಕುರಿತು ವಿಸ್ತೃತ ವಿಚಾರಣೆ ನಡೆಸಿದ ಬಳಿಕ ಸೋಮವಾರ ಆದೇಶ ಪ್ರಕಟಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ ಕುಮಾರ್‌ ಅವರು, ಅಧಿಕಾರಿಯ ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ಅರ್ಜಿದಾರರ ಸದ್ಯದ ಆರೋಗ್ಯ ಸ್ಥಿತಿಯ ಕುರಿತು ವೈದ್ಯಕೀಯ ವರದಿ ಪಡೆದು ಇ–ಮೇಲ್‌ ಮೂಲಕ ರವಾನಿಸುವಂತೆ ಧಾರವಾಡ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು