ಬುಧವಾರ, ಮೇ 12, 2021
17 °C

ಕೋವಿಡ್ ಸಾವಿಗೆ ಸರ್ಕಾರವೇ ಹೊಣೆ: ಲೋಪ ಸರಿಪಡಿಸಲು ಸಾಹಿತಿಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್ ಕಾಯಿಲೆಗೆ ಚಿಕಿತ್ಸೆ ಸಿಗದೆಯೇ ಮೃತಪಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರವೇ ನೇರ ಹೊಣೆ. ಜನಪ್ರತಿನಿಧಿಗಳು ಟೊಳ್ಳು ರಾಜಕಾರಣವನ್ನು ಬಿಟ್ಟು, ಸಮಸ್ಯೆಗಳ ನಿವಾರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ನಾಡಿನ ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು ಒತ್ತಾಯಿಸಿದ್ದಾರೆ.

ಈ ಸಂಬಂಧ ಅವರು ಜಂಟಿ ಪ್ರಕಟಣೆ ಬಿಡುಗಡೆ ಮಾಡಿದ್ದು, ಎಸ್.ಜಿ. ಸಿದ್ಧರಾಮಯ್ಯ, ಜಿ.ಕೆ. ಗೋವಿಂದ್ ರಾವ್, ಕೆ. ಮರುಳಸಿದ್ದಪ್ಪ, ಮುಖ್ಯಮಂತ್ರಿ ಚಂದ್ರು, ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, .ಆರ್.ಕೆ. ಹುಡುಗಿ, ರುದ್ರಪ್ಪ ಹನಗವಾಡಿ, ಬಿ.ಟಿ. ಲಲಿತಾ ನಾಯಕ್, ವಸುಂಧರಾ ಭೂಪತಿ, ಕೆ. ಷರೀಫಾ ಹಾಗೂ ಜಿ. ಶರಣಪ್ಪ ಅವರು ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೆಯೇ 24 ಮಂದಿ ಮೃತಪಟ್ಟಿದ್ದಾರೆ. ದಿನವೂ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿಯಿದೆ. ಇನ್ನೊಂದೆಡೆ ಹಾಸಿಗೆ ಸಿಕ್ಕರೂ ಸರಿಯಾದ ಶುಶ್ರೂಷೆ ಇಲ್ಲದೆಯೇ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಲಸಿಕೆ ಕೂಡ ಸರಿಯಾಗಿ ಸಿಗುತ್ತಿಲ್ಲ. ಮೃತರ ಅಂತ್ಯ ಸಂಸ್ಕಾರ ನಡೆಸಲು ಸ್ಮಶಾನದಲ್ಲಿ ಕೂಡ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಈ ನಡುವೆ ಅಲ್ಲಿ ಉಚಿತವಾಗಿ ತಿಂಡಿ ಹಂಚುವ ನಗುಮೊಗದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಜಾಹೀರಾತು ಫಲಕಗಳು ಮೆರೆದಾಟ ನಡೆಸುತ್ತಿವೆ. ಇದು ಕರ್ನಾಟಕದ ಬೇಜವಾಬ್ದಾರಿ ಆಡಳಿತ ವ್ಯವಸ್ಥೆಯ  ಒಂದು ಮುಖ’ ಎಂದು ತಿಳಿಸಿದ್ದಾರೆ. 

‘ಕೇಂದ್ರ ಸರ್ಕಾರವು 30 ಲಕ್ಷ ಮಂದಿ ಸೇರುವ ಕುಂಭ ಮೇಳಕ್ಕೆ ಅನುಮತಿ ನೀಡುವ ಮೂಲಕ ಕೋವಿಡ್ ಎರಡನೇ ಅಲೆಯ ಬಗ್ಗೆ ತಜ್ಞರು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿತು. ದ್ವೇಷ ರಾಜಕಾರಣದ ಜಿದ್ದಿನಲ್ಲಿ ಚುನಾವಣೆಗಳನ್ನು ನಡೆಸಿತು. ಸಮಾವೇಶಗಳನ್ನು ನಡೆಸುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಯಿತು. ಪರಿಣಾಮ ಈಗ ಕೋವಿಡ್‌ ವೇಗವಾಗಿ ವ್ಯಾಪಿಸಿಕೊಳ್ಳುತ್ತಿದ್ದು, ಸರಿಯಾಗಿ ಚಿಕಿತ್ಸೆ ಸಿಗದೆಯೇ ಸೋಂಕಿತರು ಮೃತಪಡುತ್ತಿದ್ದಾರೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ಕಾರಣ. ಜನಪ್ರತಿನಿಧಿಗಳು ಇದುವರೆಗೆ ಮಾಡಿರುವ ಘನಘೋರ ಅಪರಾಧಗಳಿಗೆ ಆತ್ಮಾವಲೋಕನ ಮಾಡಿಕೊಂಡು, ತುರ್ತಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನುಷ್ಯತ್ವ ತೋರಬೇಕು’ ಎಂದು ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು