ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಪಾದಯಾತ್ರೆ; ತಗ್ಗಿದ ಅಬ್ಬರ

ಡಿಕೆಶಿ ಹುಟ್ಟೂರು ದೊಡ್ಡಾಲಹಳ್ಳಿಯಿಂದಲೇ ದಿನದ ನಡಿಗೆ ಆರಂಭ
Last Updated 11 ಜನವರಿ 2022, 9:49 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ತವರು ಕ್ಷೇತ್ರದ ಮತದಾರರು ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಇಡೀ ದಿನದ ಯಾತ್ರೆ ಸೌಮ್ಯವಾಗಿತ್ತು. ಸರ್ಕಾರದ ತಂತ್ರಗಳ ಬಗ್ಗೆ ಬೇಸತ್ತ ಡಿಕೆಶಿ, ಮುಂದಿನ ಮೂರು ದಿನ ಮೌನವಾಗಿಯೇ ನಡೆಯುವ ನಿರ್ಧಾರ ಪ್ರಕಟಿಸಿದರು.

ಮುಂಜಾನೆ 9.30ಕ್ಕೆ ಡಿಕೆಶಿ ಹುಟ್ಟೂರು ದೊಡ್ಡಾಲಹಳ್ಳಿಯಿಂದಲೇ ದಿನದ ನಡಿಗೆ ಆರಂಭಗೊಂಡಿತು. ಮನೆ ಮಗನನ್ನು ಅಲ್ಲಿನ ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮಾಡಿ ಮುಂದಕ್ಕೆ ಬೀಳ್ಕೊಟ್ಟರು. ಅಲ್ಲಿಂದ 7 ಕಿ.ಮೀ. ಸಾಗಿದ ಪಾದಯಾತ್ರಿಗಳು ಮಧ್ಯಾಹ್ನ 2.50ಕ್ಕೆ ಮಾದಪ್ಪನದೊಡ್ಡಿ ತಲುಪಿದರು. ಕೆಲ ಹೊತ್ತು ವಿಶ್ರಾಂತಿ ಬಳಿಕ ಪಾದಯಾತ್ರೆ ಮುಂದುವರಿದಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಕನಕಪುರ ಪಟ್ಟಣದಲ್ಲಿ ದಿನದ ನಡಿಗೆ ಸಮಾಪ್ತಿಯಾಯಿತು. ಮೂರನೇ ದಿನ ಇಲ್ಲಿಂದ ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿವರೆಗೆ 15 ಕಿ.ಮೀ. ದೂರವನ್ನು ಪಾದಯಾತ್ರಿಗಳು ಕ್ರಮಿಸಲಿದ್ದಾರೆ. ಮೈಸೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗಿ ಆಗಲಿದ್ದಾರೆ.

ಸೋಮವಾರದಂದು ಕನಕಪುರದ ಜೊತೆಗೆ ನೆರೆಯ ಚಾಮರಾಜನಗರ, ಕೊಡಗು ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ನೂರಾರು ಬಸ್‌ಗಳಲ್ಲಿ ಅವರನ್ನು ಕರೆತರಲಾಗಿತ್ತು. ಕಡೆಲೆಪುರಿ, ಬೋಂಡಾ ಮೆಲ್ಲುತ್ತ, ಎಳನೀರು, ಮಜ್ಜಿಗೆ ಕುಡಿಯುತ್ತ ಹೆಜ್ಜೆ ಹಾಕಿದ ಜನರು ಮಧ್ಯಾಹ್ನ ಮಾದಪ್ಪನದೊಡ್ಡಿಯಲ್ಲಿ ಊಟ ಮುಗಿಸುತ್ತಲೇ ಬಸ್ ಏರಿದರು. ಹೀಗಾಗಿ ಸಂಜೆ ನಂತರ ಪಾದಯಾತ್ರಿಗರ ಸಂಖ್ಯೆ ಕಡಿಮೆ ಆಗಿತ್ತು. ಮಧ್ಯಾಹ್ನ ಊಟಕ್ಕೆ ಕಾಳು ಸಾರು, ಮುದ್ದೆ, ಅನ್ನ, ರಸಂ, ಮೊಸರನ್ನ, ಪಕೋಡ, ರೈಸ್‌ಬಾತ್‌ ಅನ್ನು ಸುಮಾರು 8ಸಾವಿರ ಮಂದಿಗೆ ಸಿದ್ದಪಡಿಸಲಾಗಿತ್ತು.

ಏಕಾಂಗಿ ನಡಿಗೆ: ಎರಡನೇ ದಿನದಂದು ಕಾಂಗ್ರೆಸ್‌ನ ಕೆಲವು ನಾಯಕರಷ್ಟೇ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈಶ್ವರ ಖಂಡ್ರೆ, ಉಮಾಶ್ರೀ, ಬಿ.ಕೆ. ಹರಿಪ್ರಸಾದ್, ಎಂ.ಬಿ.ಪಾಟೀಲ, ಸಲೀಂ ಅಹಮ್ಮದ್, ನರೇಂದ್ರ ಸ್ವಾಮಿ, ಪ್ರಿಯಾಂಕ್‌ ಖರ್ಗೆ, ವಿನಯ್ ಕುಲಕರ್ಣಿ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌ ಕಾಣಿಸಿಕೊಂಡರು.

ಡಿ.ಕೆ. ಶಿವಕುಮಾರ್ ಮಾತ್ರ ಸ್ಥಳೀಯ ಕಾರ್ಯಕರ್ತರ ಜೊತೆಗೂಡಿ ಮುನ್ನಡೆದರು. ಮಧ್ಯಾಹ್ನ ಊಟದ ವೇಳೆ ಕಾಲು ನೋವಿನ ಕಾರಣಕ್ಕೆ ವಿಶ್ರಾಂತಿ ಪಡೆದರು. ಈ ನಡುವೆ ತೊಪ್ಪಲೇಗೌಡನ ದೊಡ್ಡಿಯಲ್ಲಿನ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕಾಲ ಕಳೆದರು. ಮರಳೇ ಗವಿ ಮಠಕ್ಕೂ ಭೇಟಿ ನೀಡಿದರು.

ದಾರಿಯುದ್ಧಕ್ಕೂ ಮಹಿಳೆಯರು ಕಳಸ ಹಿಡಿದು ಸ್ವಾಗತಿಸಿದ್ದು, ಕೆಲವರು ದೃಷ್ಟಿ ತೆಗೆದರು. ಅಂಗವಿಕಲರ ವ್ಯಕ್ತಿಯೊಬ್ಬರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಉತ್ತರ ಕರ್ನಾಟಕ ಭಾಗದ ವ್ಯಕ್ತಿಯೊಬ್ಬರು ದೀಡ್‌ ನಮಸ್ಕಾರದೊಂದಿಗೆ ಮುನ್ನಡೆದರು.

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಡಿಕೆಶಿ
ಸೋಮವಾರ ಬೆಳಿಗ್ಗೆ ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. ’ಅನಾರೋಗ್ಯ ಇದ್ದರೆ ಇಂದು ಬರುವುದು ಬೇಡ. ನಾಳೆ ಕನಕಪುರಕ್ಕೆ ನೇರವಾಗಿ ಬನ್ನಿ’ ಎಂದು ಆಹ್ವಾನ ನೀಡಿದರು. ತಮಗೆ ಅಧಿಕಾರಿಗಳು ಕೋವಿಡ್ ಪರೀಕ್ಷೆ ನಡೆಸಲು ಬಂದಿದ್ದನ್ನೂ ಅವರು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT