ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಜನಗಣತಿಯಲ್ಲಿ ‘ಲಿಂಗಾಯತ’ ಧರ್ಮ ಎಂದೇ ನಮೂದಿಸಿ: ಲಿಂಗಾಯತ ಸಂಘಟನೆಗಳ ಮನವಿ

Last Updated 30 ಮೇ 2022, 11:22 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ. ಆದ್ದರಿಂದ ಮುಂದಿನ ಜನಗಣತಿಯಲ್ಲಿ ಧರ್ಮವನ್ನು ‘ಲಿಂಗಾಯತ’ ಎಂದೇ ನಮೂದಿಸಬೇಕು’ ಎಂದು ಲಿಂಗಾಯತ ಸಂಘಟನೆಗಳು ಮನವಿ ಮಾಡಿವೆ.

ಲಿಂಗಾಯತ ಮಠಾಧೀಶರ ಒಕ್ಕೂಟ, ಲಿಂಗಾಯತ ಧರ್ಮಮಹಾಸಭೆ ಮತ್ತು ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಸಮಿತಿ, ಬಸವ ಧರ್ಮ ಪ್ರತಿಷ್ಠಾನಗಳ ಪದಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು, ಡಂಬಳ ತೋಂಟಾದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾದ ಗಂಗಾ ಮಾತಾಜಿ, ಬಸವ ಧರ್ಮ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ, ಮೈಸೂರಿನ ನೀಲಕಂಠ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಅಥಣಿಯ ಚನ್ನಬಸವಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ.ಜಾಮದಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಲಿಂಗಾಯತ ಎಂಬುದು ವಿಶೇಷ ತತ್ವ, ಸಿದ್ಧಾಂತಗಳೊಂದಿಗೆ 900 ವರ್ಷಗಳ ಇತಿಹಾಸ ಹೊಂದಿರುವ ಧರ್ಮ. ವೀರಶೈವ ಮಹಾಸಭಾವು2018ರಲ್ಲಿ ತೆಗೆದುಕೊಂಡ ಕೆಟ್ಟ ತೀರ್ಮಾನಗಳಿಂದ ಲಿಂಗಾಯತ ಮತ್ತು ವೀರಶೈವ ಲಿಂಗಾಯಿತರ ನಡುವೆ ಗೊಂದಲಗಳು ಸೃಷ್ಟಿಯಾಗಿವೆ. ಲಿಂಗಾಯತ ಧರ್ಮದಲ್ಲಿ 102 ಉಪ ಪಂಗಡಗಳಿದ್ದು, ಅದರಲ್ಲಿ ವೀರಶೈವ ಕೂಡ ಒಂದು ಉಪಪಂಗಡ. ಆದ್ದರಿಂದ ಅವರೂ ಲಿಂಗಾಯತ ಧರ್ಮದವರೇ ಆಗಿದ್ದಾರೆ’ ಎಂದು ವಿವರಿಸಿದರು.

’ವೀರಶೈವ ಮಹಾಸಭಾ ದ್ವಂದ್ವ ನೀತಿಯಿಂದ ಸ್ವತಂತ್ರ ಧರ್ಮವಾಗುವ ಅವಕಾಶ ತಪ್ಪಿತು. ಅಲ್ಪಸಂಖ್ಯಾತ ಕೋಟದಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ದೊರೆಯಬಹುದಾದ 5 ಸಾವಿರ ಪದವಿ ಮತ್ತು 500ಕ್ಕೂ ಹೆಚ್ಚು ಸ್ನಾತಕೋತ್ತರ ಪದವಿ ಸೀಟುಗಳಿಂದ ಲಿಂಗಾಯಿತ ವಿದ್ಯಾರ್ಥಿಗಳು ವಂಚಿತರಾದರು’ ಎಂದರು.

‘ವೀರಶೈವ ಮಹಾಸಭಾ’ ಎಂದು ಇದ್ದ ಹೆಸರನ್ನು ಈಗ ‘ವೀರಶೈವ ಲಿಂಗಾಯತ ಮಹಾಸಭಾ’ ಎಂದು ಬದಲಿಸಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ಧರ್ಮವನ್ನು ಒಡೆದವರು ಯಾರು ಎಂಬುದು ಗೊತ್ತಾಗುತ್ತದೆ. ಜನಗಣತಿಯಲ್ಲಿ ಲಿಂಗಾಯತರನ್ನು ‘ವೀರಶೈವ ಲಿಂಗಾಯತ’ ಎಂದು ನಮೂದಿಸಿದರೆ ಲಿಂಗಾಯತ ಸಮಾಜದ ಅಸ್ತಿತ್ವ, ಅಸ್ಮಿತೆ ಮುತ್ತು ಅಲ್ಪಸಂಖ್ಯಾತ ಧರ್ಮದ ಹೋರಾಟ ಶಾಶ್ವತವಾಗಿ ದಾರಿ ತಪ್ಪಿದಂತೆ ಆಗಲಿದೆ. ಆದ್ದರಿಂದ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ನಮೂದಿಸಬೇಕು’ ಎಂದು ಹೇಳಿದರು.

‘ಒಬಿಸಿ ಮೀಸಲಾತಿಗೆ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT