ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಸಿರಿಧಾನ್ಯ ಉತ್ಪಾದನೆ

ಕೃಷಿ ವಿ.ವಿಗಳಲ್ಲಿ ಬಿತ್ತನೆ ಬೀಜ ಬ್ಯಾಂಕ್‌ ಸ್ಥಾಪನೆ: ಬೆಲೆ ಆಯೋಗದ ಶಿಫಾರಸು
Last Updated 5 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆ, ಬಿತ್ತನೆ ಪ್ರದೇಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿದ್ದರೂ ಈ ಬೆಳೆಗಳಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ ಎಂಬುದು ಬೆಲೆ ಆಯೋಗದ ಸಮೀಕ್ಷೆಯಿಂದ ಗೊತ್ತಾಗಿದೆ.

ಪ್ರಮುಖ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಬರಗು, ಕೊರಲೆ ಹಾಗೂ ಊದಲನ್ನು ಮಧ್ಯಪ್ರದೇಶ, ಉತ್ತರಾಖಂಡ್‌, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ರಾಜಸ್ಥಾನದಲ್ಲಿ ಶೇ 38, ಮಹಾರಾಷ್ಟ್ರದಲ್ಲಿ ಶೇ 19 ರಷ್ಟು ಸಿರಿಧಾನ್ಯ ಬೆಳೆದರೆ, ರಾಜ್ಯದಲ್ಲಿ ಕೇವಲ ಶೇ 13ರಷ್ಟು ಸಿರಿಧಾನ್ಯ ಉತ್ಪಾದನೆ ಆಗುತ್ತಿದೆ.

‘ಹೆಸರಿಗಷ್ಟೇ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ರಫ್ತು, ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ ದೊರೆಯುತ್ತಿಲ್ಲ. ಈ ಕಾರಣಕ್ಕೆ ಸಿರಿಧಾನ್ಯಗಳ ಬಿತ್ತನೆಗೆ ರಾಜ್ಯದಲ್ಲಿ ರೈತರು ಆಸಕ್ತಿ ತೋರುತ್ತಿಲ್ಲ’ ಎಂದು ರೈತರು ಹೇಳುತ್ತಾರೆ.

2021 ಕ್ಕೆ ಹೋಲಿಸಿದರೆ, 2022ರಲ್ಲಿ ಸಿರಿಧಾನ್ಯ ಬೆಳೆಯ ವಿಸ್ತೀರ್ಣದಲ್ಲಿ ಶೇ 8.02ರಷ್ಟು ಹಾಗೂ ಉತ್ಪಾದನೆಯಲ್ಲಿ ಶೇ 21.20ರಷ್ಟು ಕುಸಿತವಾಗಿದೆ. ರಾಗಿ ಬೆಳೆ ವಿಸ್ತೀರ್ಣ ದಲ್ಲಿ ಶೇ 7.81ರಷ್ಟು ಹೆಚ್ಚಾಗಿದ್ದರೂ, ಮಳೆಯ ವ್ಯತ್ಯಾಸದಿಂದ ಉತ್ಪಾದನೆಯಲ್ಲಿ ಶೇ 17.68ರಷ್ಟು ಕುಸಿದಿದೆ. ಈ ಸಾಲಿನಲ್ಲಿ ಸಜ್ಜೆ, ಜೋಳ ಬೆಳೆಯ ವಿಸ್ತೀರ್ಣವೂ ಇಳಿಕೆಯಾಗಿದೆ.

‘ರಾಜ್ಯದಲ್ಲಿ ಕಳೆದ ವರ್ಷ 16.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 20.55 ಲಕ್ಷ ಟನ್‌ ಸಿರಿಧಾನ್ಯ ಉತ್ಪಾದನೆಯಾಗಿದೆ. ರೈತರಿಗೆ ಪ್ರೋತ್ಸಾಹ ಲಭಿಸಿದರೆ ದುಪ್ಪಟ್ಟು ಉತ್ಪಾದನೆ ಸಾಧ್ಯವಾಗಲಿದೆ. ಈ ವರ್ಷವೂ ಮತ್ತಷ್ಟು ಕುಸಿಯಲಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹೇಳುತ್ತಾರೆ.

ಆಯೋಗದ ಶಿಫಾರಸುಗಳು: ಸಿರಿಧಾನ್ಯ ವರ್ಷಾ ಚರಣೆ ಕಾರಣಕ್ಕೆ ಉತ್ಪಾದನೆ, ಬಿತ್ತನೆ ಪ್ರಮಾಣ ಹೆಚ್ಚಿಸುವಂತೆ ಬೆಲೆ ಆಯೋಗವು ಕೆಲವು ಶಿಫಾರಸು ಮಾಡಿದೆ.

ಬೆಂಬಲ ಬೆಲೆ ಯೋಜನೆ ಅಡಿ ಜೋಳ, ರಾಗಿ ಹಾಗೂ ಸಜ್ಜೆ ಖರೀದಿಸಲಾಗುತ್ತಿದೆ. ನವಣೆ, ಸಾಮೆ, ಹಾರಕ, ಬರಗು, ಕೊರಲೆ ಹಾಗೂ ಊದಲು ಸಹ ಖರೀದಿಸಿದರೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಹೇಳಿದೆ.

ಕೃಷಿ ವಿಶ್ವವಿದ್ಯಾಲಯಗಳಲ್ಲಿ ತಳಿಯ ಸಂರಕ್ಷಣೆಗೆ ಬಿತ್ತನೆ ಬೀಜ ಬ್ಯಾಂಕ್‌ ಸ್ಥಾಪಿಸಬೇಕು. ರೈತ ಸಂಪರ್ಕ ಕೇಂದ್ರಗಳ ಮೂಲಕವೇ ಬಿತ್ತನೆಗೆ ಬೀಜ ಪೂರೈಸಬೇಕು. ‘ರೈತ ಸಿರಿ’ ಯೋಜನೆಯಲ್ಲಿ ನವಣೆ ಮತ್ತು ಸಾಮೆ ಬೆಳೆಗಳನ್ನು ಮಾತ್ರ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಉಳಿದ ಸಿರಿಧಾನ್ಯ ಬೆಳೆಗಳನ್ನೂ ಈ ಯೋಜನೆ ವ್ಯಾಪ್ತಿಗೆ ತರುವಂತೆ ಆಯೋಗವು ಶಿಫಾರಸು ಮಾಡಿದೆ.

*
ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ಎಂದು ಘೋಷಿಸಿದರೆ ಸಾಲದು. ರೈತರಿಗೆ ಬಿತ್ತನೆಬೀಜವನ್ನು ಉಚಿತವಾಗಿ ವಿತರಣೆ ಮಾಡಬೇಕು.
-ನಾಗರಾಜ್‌, ಬರಡನಪುರ, ಮೈಸೂರು ಜಿಲ್ಲೆ

**

ಪ್ರಮುಖ ಜಿಲ್ಲೆಗಳಲ್ಲಿ ಬೆಳೆ ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ)

ಬಾಗಲಕೋಟೆ;79,062
ಬೆಳಗಾವಿ;1,38,926
ಬಳ್ಳಾರಿ;70,679
ಬೀದರ್‌;34,744
ವಿಜಯಪುರ;55,222
ಚಾಮರಾಜನಗರ;27,052
ಚಿಕ್ಕಬಳ್ಳಾಪುರ;46,571
ಚಿತ್ರದುರ್ಗ;56,068
ದಾವಣಗೆರೆ;24,166
ಮೈಸೂರು;98,406

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT