ಶುಕ್ರವಾರ, ಅಕ್ಟೋಬರ್ 23, 2020
21 °C
ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ

ಖಾಸಗಿ ಶಾಲಾ ಶಿಕ್ಷಕರಿಗೂ ಆರ್ಥಿಕ ನೆರವು: ಮಾಧುಸ್ವಾಮಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವೇತನವಿಲ್ಲದೆ ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ನೆರವು ತಲುಪದ ಆಟೊ ಚಾಲಕರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗುವುದು’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಧನವಿನಿಯೋಗ ಮಸೂದೆ’ ಮಂಡಿಸಿ‌ ಮಾತನಾಡಿದ ಅವರು, ‘ಬಜೆಟ್‍ನಲ್ಲಿ ಸೇರ್ಪಡೆಯಾಗದೆ ಇರುವ ಮತ್ತು ಅನಿವಾರ್ಯವಾಗಿ ಎದುರಾಗುವ ಖರ್ಚುಗಳನ್ನು ನಿಭಾಯಿಸಲು ಪೂರಕ ಬಜೆಟ್‍ ಮಂಡಿಸಲಾಗುತ್ತದೆ. ಈ ಬಾರಿ ₹ 4,008 ಕೋಟಿ ಹೆಚ್ಚುವರಿ ಬಜೆಟ್‍ ಮಂಡಿಸಲಾಗಿದೆ’ ಎಂದರು. ಹೆಚ್ಚುವರಿ ವೆಚ್ಚದ ಮಾಹಿತಿಯನ್ನೂ ನೀಡಿದರು.

ಈ ವೇಳೆ ಜೆಡಿಎಸ್‍ನ ಬಸವರಾಜ ಹೊರಟ್ಟಿ, ‘ಅನುದಾನರಹಿತ ಶಾಲೆ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಸಂಕಷ್ಟದಲ್ಲಿದ್ದು, ಅವರಿಗೆ ನೆರವು ನೀಡಿಲ್ಲ. ನಿಮ್ಮ ಸರ್ಕಾರಕ್ಕೆ ಕರುಣೆ ಇಲ್ಲವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘ಈ ಶಿಕ್ಷಕರಿಗೆ ಯಾವುದೇ ನೆರವು ನೀಡಿಲ್ಲ. ನಿಶ್ಚಿತಾರ್ಥ ಆದವರಿಗೆ ಮದುವೆಯಾಗಿಲ್ಲ. ಮದುವೆಯಾದವರು ಪತ್ನಿಯನ್ನು ಕರೆ ತಂದು ಮನೆ ಮಾಡಿ ಸಂಸಾರ ಶುರು ಮಾಡಿಲ್ಲ. ಜೀವನ ಮಾಡಲು ಸಾಧ್ಯವಾಗದೆ ಕಷ್ಟದಲ್ಲಿದ್ದಾರೆ’ ಎಂದರು.

ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ಜೆಡಿಎಸ್‌ನ ತಿಪ್ಪೇಸ್ವಾಮಿ, ‘ಆಟೊ ಚಾಲಕರು, ಸವಿತಾ ಸಮಾಜ, ಮಡಿವಾಳರು ಸೇರಿದಂತೆ ವೃತ್ತಿ ಆಧಾರಿತ ಸಮುದಾಯಗಳಿಗೆ ಎಷ್ಟು ನೆರವು ನೀಡಿದ್ದೀರಿ’ ಎಂದು ಕೇಳಿದಾಗ, ಅಂಕಿಅಂಶ ನೀಡಿದ ಮಾಧುಸ್ವಾಮಿ, ‘ಆರ್ಥಿಕ ನೆರವು ತಲುಪದವರಿಂದ ಇನ್ನೊಮ್ಮೆ ಅರ್ಜಿ ಆಹ್ವಾನಿಸಲು ನಿರ್ಧರಿಸಲಾಗಿದೆ’ ಎಂದರು.

ನಂಬ ಬೇಕಾ– ಹೊರಟ್ಟಿ; ಬೇಡ ಬಿಡು ಮಾಧುಸ್ವಾಮಿ
‘ಮಸೂದೆಗೆ ಅಂಗೀಕಾರ ಪಡೆದುಕೊಳ್ಳಲು ನೀವೇ ಬರುತ್ತೀರಾ, ಶಿಕ್ಷಕರಿಗೆ ನೆರವು ನೀಡಿ ಎಂದರೆ ಮುಖ್ಯಮಂತ್ರಿ ಮೇಲೆ ಹೇಳುತ್ತೀರಾ’ ಎಂದೂ ಹೊರಟ್ಟಿ ಸಿಟ್ಟಾದರು.

‘ಇಲ್ಲಿ ನಾನು ಏನೇ ಮಾಡಿದರೂ ಮುಖ್ಯಮಂತ್ರಿ ಹೆಸರಿನಲ್ಲೆ ಮಾಡುತ್ತೇನೆ’ ಎಂದು ಮಾಧುಸ್ವಾಮಿ ಹೇಳಿದರು. ‘ಈ ವಿಷಯವಾಗಿ ನಿಮ್ಮನ್ನು ನಂಬಬಹುದೆ’ ಎಂದು ಹೊರಟ್ಟಿ ಕೇಳಿದಾಗ, ‘ನಂಬಿದರೆ ನಂಬಿ, ನಂಬದಿದ್ದರೆ ಬಿಡಿ’ ಎಂದು ಉತ್ತರಿಸಿದರು.

‘ಸ್ನೇಹಿತನ ಮಾತನ್ನು ನಂಬಬೇಕಪ್ಪ, ಅದನ್ನು ಬಿಟ್ಟು ನಂಬಬೇಕಾ ಎಂದು ಕೇಳಿದರೆ ನಾನು ಏನು ಹೇಳಲು ಸಾಧ್ಯ. ನಂಬಬೇಡ ಬಿಡು’ ಎಂದೂ ಮಾಧುಸ್ವಾಮಿ ಹೇಳಿದಾಗ, ‘ಕೆಲಸ ಮಾಡಿಸಿಕೊಡುತ್ತಿಯೋ ಟೋಪಿ ಹಾಕಿಸುತ್ತೀಯೋ ಎಂಬ ಆತಂಕ’ ಎಂದು ಹೊರಟ್ಟಿ ಹೇಳಿದರು.

‘ಟೋಪಿ ಹಾಕಿಸುವುದು ಉತ್ತರ ಕರ್ನಾಟಕದವರು’ ಎಂದು ಹೊರಟ್ಟಿಯವರನ್ನು ಮಾಧುಸ್ವಾಮಿ ಛೇಡಿಸಿದರು. ‘ಆಡದೆ ಮಾಡುವವನು ರೂಢಿಯಲಿ ಉತ್ತಮನು ಎಂದು ನಿನ್ನ ಧರ್ಮ ಹೇಳಿದೆ. ಮಾಡಿ ತೋರಿಸುತ್ತೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು