ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಉದ್ಘಾಟನೆಗಾಗಿ ಕಿತ್ತಾಡಿದ ಎಂಟಿಬಿ ನಾಗರಾಜ್ - ಶರತ್‌ ಬಚ್ಚೇಗೌಡ

ವೇದಿಕೆಯಲ್ಲಿ ವಾಕ್ಸಮರ: ಭಾಷಣ ಮಾಡದೆ ಹೊರನಡೆದ ಸಚಿವ, ಶಾಸಕ
Last Updated 10 ಫೆಬ್ರುವರಿ 2022, 20:49 IST
ಅಕ್ಷರ ಗಾತ್ರ

ಹೊಸಕೋಟೆ: ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ವಿಚಾರವಾಗಿ ಗುರುವಾರ ಶಾಸಕ ಶರತ್ ಬಚ್ಚೇಗೌಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಅನುಗೊಂಡನಹಳ್ಳಿ ಹೋಬಳಿ ಮುತ್ಸಂದ್ರ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲ ಕಾಲ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ನೂತನ ಕಟ್ಟಡದ ಟೇಪ್‌ ಕತ್ತರಿಸಲು ಮುಂದಾದ ಶಾಸಕ ಶರತ್‌ ಅವರಿಗೆ ‘ಬಚ್ಚೇಗೌಡರ ಕಾಲದಿಂದಲೂ ನಿಮ್ಮದು ಇದೇ ಆಗಿ ಹೋಯಿತು’ ಎಂದು ನಾಗರಾಜ್‌ ಕೋಪದಿಂದ ಹೇಳಿದರು. ಇದರಿಂದ ಕೆರಳಿದ ಶರತ್‌, ‘ನನ್ನ ಬಗ್ಗೆ ಮಾತನಾಡಿ. ನನ್ನ ತಂದೆಯ ಬಗ್ಗೆ ಯಾಕೆ ಮಾತನಾಡುತ್ತೀರ’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಸಚಿವ ಮತ್ತು ಶಾಸಕರ ವಾಕ್ಸಮರ ಮುಂದುವರೆಯಿತು. ‘ಮೊದಲು ನೀವೇ ಮಾತನಾಡಿ’ ಎಂದು ಪರಸ್ಪರ ಕೋಪದಿಂದ ಹೇಳಿ ಇಬ್ಬರೂ ಭಾಷಣ ಮಾಡದೆ ತೆರಳಿದರು.

‘ಸಚಿವ ಎಂ.ಟಿ.ಬಿ ನಾಗರಾಜ್ ಉದ್ಘಾಟನೆ ಸಂದರ್ಭದಲ್ಲಿ ವೈಯಕ್ತಿಕ ತೇಜೋವಧೆಯ ಮಾತನಾಡಿದರು. ನನ್ನ ತಂದೆಯ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ನಾನು ಪ್ರಶ್ನಿಸಲೇ ಬೇಕಾಗಿತ್ತು’ ಎಂದು ಶರತ್ ಬಚ್ಚೇಗೌಡ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

‘ಸರ್ಕಾರದ ಪರವಾಗಿ ನಾನು ಉದ್ಘಾಟಕನಾಗಿ ಬಂದಿದ್ದೇನೆ. ಶಾಸಕರು ಅಧ್ಯಕ್ಷತೆ ವಹಿಸಿದ್ದಾರೆಯೇ ಹೊರತು ಉದ್ಘಾಟಕರಲ್ಲ. ನಮ್ಮ ಸರ್ಕಾರದ ಕಾಮಗಾರಿಗಳನ್ನೆಲ್ಲಾ ಇವರೇ ಉದ್ಘಾಟಿಸುತ್ತಾರೆ ’ ಎಂದು ಎಂ.ಟಿ.ಬಿ ನಾಗರಾಜ್ ಪ್ರತಿಕ್ರಿಯಿಸಿದರು.

‘ಬಚ್ಚೇಗೌಡ ಕುಟುಂಬದಿಂದ ಗೂಂಡಾಗಿರಿ’

ಬೆಂಗಳೂರು: ‘ಶಿಷ್ಟಾಚಾರದ ಪ್ರಕಾರ ಉಸ್ತುವಾರಿ ಸಚಿವರು ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಡಿಜಿಟಲ್‌ ಗ್ರಂಥಾಲಯ ಉದ್ಘಾಟಿಸಬೇಕಿತ್ತು. ಆದರೆ, ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಬಂದಿರಲಿಲ್ಲ. ಉಸ್ತುವಾರಿ ಇಲ್ಲದೇ ಇದ್ದರೆ ಸಚಿವನಾಗಿ ನಾನು ಉದ್ಘಾಟಿಸಬೇಕಿತ್ತು. ಆದರೆ, ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್‌ ಕಿಡಿಕಾರಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬಚ್ಚೇಗೌಡ ಕುಟುಂಬದರು ಹೊಸಕೋಟೆ ಕ್ಷೇತ್ರವನ್ನು ಬಿಹಾರ ರೀತಿ ಮಾಡಿದ್ದರು. ಅವರಿಂದ ಭೀತರಾಗಿ ಎಷ್ಟೋ ಜನರು ಊರು ತೊರೆದಿದ್ದಾರೆ. ಕೆರೆ, ಸ್ಮಶಾನ ಹೀಗೆ ಎಲ್ಲ ಜಾಗವನ್ನೂ ಕಬಳಿಸಿದ್ದಾರೆ. ಆ ಬಗ್ಗೆ ಮಾತನಾಡಲು ನಾನು ದಾಖಲೆ ಸಹಿತ ಸಿದ್ಧ’ ಎಂದರು.

‘ಮೊದಲು ಹೊಸಕೋಟೆ ಗೂಂಡಾ ತಾಲ್ಲೂಕು ಆಗಿತ್ತು. ಚುನಾವಣೆ ಸಂದರ್ಭದಲ್ಲಿ ಮಾಡಬಾರದ್ದನ್ನು ಮಾಡುತ್ತಿದ್ದರು. ಅವರು ಎಷ್ಟೋ ಕೊಲೆಗಳನ್ನು ಮಾಡಿದ್ದಾರೆ. ನಾನು ಬಂದ ಮೇಲೆ ಹೊಸಕೋಟೆ ತಾಲ್ಲೂಕು ಶಾಂತಿಯುತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT