ಭಾನುವಾರ, ನವೆಂಬರ್ 1, 2020
20 °C

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಸಚಿವ ಪ್ರಭು ಚವ್ಹಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ಸುಳ್ಳು, ಮೋಸದಿಂದ ಜಾತಿ ಪ್ರಮಾಣಪತ್ರ ಪಡೆದಿರುವುದು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಸುಳ್ಳು ಎಂದಾದರೆ ಈ ಆರೋಪ ಮಾಡಿರುವ ಮಾಜಿ ಸಚಿವ ಎಚ್‌. ಆಂಜನೇಯ ಬಹಿರಂಗವಾಗಿ ಕ್ಷಮೆ ಕೋರಲಿ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಸವಾಲು ಹಾಕಿದ್ದಾರೆ.

‘ಪ್ರಭು ಚವ್ಹಾಣ್‌ ಜಾತಿ ಪ್ರಮಾಣ ಪತ್ರ ನಕಲಿಯಾಗಿದ್ದು, ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಂಜನೇಯ ಆಗ್ರಹಿಸಿದ್ದರು.

‘ನನ್ನ ಜಾತಿ, ಜನ್ಮದ ಮೂಲದ ಬಗ್ಗೆ ತಿಳಿಯಬೇಕಿದ್ದರೆ ನನ್ನ ಕ್ಷೇತ್ರಕ್ಕೆ ಬಂದುವಾಸ್ತವ ಏನೆಂಬುದನ್ನು ಆಂಜನೇಯ ತಿಳಿದುಕೊಳ್ಳಲಿ. ನಾನು ಕರ್ನಾಟಕದವನು, ಅಪ್ಪಟ ಕನ್ನಡಿಗ. ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಬೋಂತಿ ತಾಂಡಾ ನನ್ನ ಹುಟ್ಟೂರು. ಪರಿಶಿಷ್ಟ ಜಾತಿಯ (ಎಸ್.ಸಿ) ಲಂಬಾಣಿ ಜನಾಂಗಕ್ಕೆ ಸೇರಿದ್ದೇನೆ. ಯಾರೋ ಕುತಂತ್ರಿಗಳು ನೀಡಿದ ಸುಳ್ಳು ಮಾಹಿತಿ ನಂಬಿದ ಆಂಜನೇಯ ಅವರು, ನಾನು ಮಹಾರಾಷ್ಟ್ರದಿಂದ ಬಂದವನು ಎಂದು ಆರೋಪಿಸಿದ್ದಾರೆ’ ಎಂದು ಚವ್ಹಾಣ್‌‌ ಹೇಳಿದ್ದಾರೆ.

‘ಔರಾದ್ ಕ್ಷೇತ್ರ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ನಾನು ಬಾಲ್ಯದಲ್ಲಿದ್ದಾಗ ಅಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಅನಿವಾರ್ಯವಾಗಿ ಮರಾಠಿ ಕಲಿಯಬೇಕಾಯಿತು. ನನ್ನ ಕ್ಷೇತ್ರದ ನಾಲ್ಕು ಹೋಬಳಿಗಳ 50–60 ಹಳ್ಳಿಗಳ ಒಂದು ಲಕ್ಷದಷ್ಟು ಜನರು ಮರಾಠಿ ಮಾತನಾಡುತ್ತಾರೆ. ಹಾಗಾದರೆ, ಅವರೆಲ್ಲ ಮಹಾರಾಷ್ಟ್ರದವರಾ? ಎಂಬುದಕ್ಕೆ ಆಂಜನೇಯ ಉತ್ತರಿಸಬೇಕು’ ಎಂದೂ ಸವಾಲು ಹಾಕಿದ್ದಾರೆ.

‘2008ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ನನ್ನ ಜಾತಿ, ಜನ್ಮ ಸ್ಥಳದ ಬಗ್ಗೆ ಆಕ್ಷೇಪ ಎತ್ತಿದ್ದರು. ಆಗ ವಿಚಾರಣೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಆಕ್ಷೇಪಗಳನ್ನು ತಳ್ಳಿ ಹಾಕಿದ್ದರು. 2009ರಲ್ಲಿ ಬಾಬು ತಾರೆ ಎಂಬುವರು ಜಾತಿ, ಜನ್ಮದ ವಿಷಯ ಕುರಿತು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ. 2015ರಲ್ಲಿ ಶಂಕರರಾವ ದೊಡ್ಡಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. 15 ತಿಂಗಳು ವಿಚಾರಣೆ ನಡೆಸಿದ ನಿರ್ದೇಶನಾಲಯ ದೂರಿನಲ್ಲಿ ಹುರುಳಿಲ್ಲ ಎಂದು ಹೇಳಿದೆ’ ಎಂದು ಚವ್ಹಾಣ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು