ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ: ಸಚಿವ ಆರ್‌.ಅಶೋಕ

Last Updated 14 ಮಾರ್ಚ್ 2022, 21:55 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ಇರುವುದು ನಿಜ. 15–20 ದಿನಗಳಿಗೊಮ್ಮೆ ಈ ಸಮಸ್ಯೆ ಆಗುತ್ತಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಒಪ್ಪಿಕೊಂಡರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಶರತ್‌ ಬಚ್ಚೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬಿಎಸ್‌ಎನ್ಎಲ್‌ ಹಾಗೂ ಏರ್‌ಟೆಲ್‌ ಸಂಸ್ಥೆಗಳ ಸಹಯೋಗದಲ್ಲಿ ಈ ಕಚೇರಿಗಳಿಗೆ ನೆಟ್‌ವರ್ಕ್‌ ಒದಗಿಸಲಾಗಿದೆ. ಹವಾಮಾನ ವೈಪರೀತ್ಯದಿಂದ ಕೆಲವೊಮ್ಮೆ ಬಿಎಸ್‌ಎನ್ಎಲ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆ ಸಮಯದಲ್ಲಿ ನೋಂದಣಿ ಪ್ರಕ್ರಿಯೆಯೂ ತೊಂದರೆ ಆಗುತ್ತಿದೆ. ಈ ಸಮಸ್ಯೆಯನ್ನು ಇ– ಆಡಳಿತ ಪರಿಹರಿಸುತ್ತಿದೆ’ ಎಂದು ಹೇಳಿದರು.

ಈ ವರ್ಷ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ₹12,655 ಕೋಟಿ ರಾಜಸ್ವ ಸಂಗ್ರಹಿಸುವ ಗುರಿ ಹೊಂದಿತ್ತು. ಇಲಾಖೆ ಹೆಚ್ಚುವರಿಯಾಗಿ ₹50 ಕೋಟಿ ರಾಜಸ್ವ ಸಂಗ್ರಹಿಸಿದೆ ಎಂದು ಅವರು ಹೇಳಿದರು.

ಜೆಡಿಎಸ್‌ನ ಎ.ಮಂಜುನಾಥ್‌ ಅವರು ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಮನಗರ ಜಿಲ್ಲೆಯ ಬಿಡದಿ ಹಾಗೂ ಕುದೂರು ಪಟ್ಟಣದಲ್ಲಿ ಉಪನೋಂದಣಾಧಿಕಾರಿ ಕಚೇರಿ ಆರಂಭಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ವಿವಿಧ ಕಡೆಗಳಲ್ಲಿ ಅಗತ್ಯ ಇರುವಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿಗಳನ್ನು ಆರಂಭಿಸಲಾಗುವುದು’ ಎಂದು ಹೇಳಿದರು.

ನಾಡಕಚೇರಿಗೆ ಚಿಕ್ಕಾಸು ಅನುದಾನ: ನಾಡ ಕಚೇರಿಗಳ ನಿರ್ಮಾಣಕ್ಕೆ ಸರ್ಕಾರ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲದು ಎಂದು ಹಲವು ಸದಸ್ಯರು ಆಕ್ಷೇಪಿಸಿದರು.

ಈ ಬಗ್ಗೆ ಕಾಂಗ್ರೆಸ್‌ನ ಅನಿಲ್‌ ಚಿಕ್ಕಮಾದು ಪ್ರಶ್ನೆ ಕೇಳಿದರು. ನಾಡ ಕಚೇರಿ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನದ ಬಗ್ಗೆ ಸಚಿವ ಅಶೋಕ ಉತ್ತರ ನೀಡಿದರು. ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ, ‘ನಾಡ ಕಚೇರಿಗಳಲ್ಲಿ ಎರಡು ಕುರ್ಚಿಗಳನ್ನು ಹಾಕಲು ಜಾಗ ಇರುವುದಿಲ್ಲ’ ಎಂದು ಹೇಳಿದರು. ಕುಮಾರ ಬಂಗಾರಪ್ಪ ಅವರು ಸಹ ಧ್ವನಿಗೂಡಿಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಬೆಂಗಳೂರಿನಲ್ಲಿ ಕುಳಿತು ಅವುಗಳ ವಿನ್ಯಾಸ ಮಾಡಲಾಗುತ್ತದೆ. ಆಯಾ ಪ್ರದೇಶಕ್ಕೆ ತಕ್ಕಂತೆ ವಿನ್ಯಾಸ ಮಾಡುತ್ತಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಾಡ ಕಚೇರಿಗಳಿಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT