ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸನಪುರ ಮಾರುಕಟ್ಟೆ: 2 ತಿಂಗಳಲ್ಲಿ ಪೂರ್ಣ –ಎಸ್.ಟಿ. ಸೋಮಶೇಖರ್ ಭರವಸೆ

Last Updated 15 ಮಾರ್ಚ್ 2022, 21:55 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಎರಡು ತಿಂಗಳಲ್ಲಿ ದಾಸನಪುರ ಮಾರುಕಟ್ಟೆಯ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಯಶವಂತಪುರ ಮಾರುಕಟ್ಟೆಯ ಎಲ್ಲ ಮಳಿಗೆಗಳನ್ನು ಸ್ಥಳಾಂತರಿಸಲಾಗುವುದು’ ಎಂದು ಸಹಕಾರ ಸಚಿವಎಸ್.ಟಿ. ಸೋಮಶೇಖರ್ ಭರವಸೆ ನೀಡಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಎಸ್. ರವಿ, ‘ಯಶವಂತಪುರ ಮಾರುಕಟ್ಟೆ ಮೇಲಿನ ಒತ್ತಡ ಕಡಿಮೆ ಮಾಡಲು ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು 80 ಎಕರೆ ಜಾಗದಲ್ಲಿ ₹ 400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಮಾರುಕಟ್ಟೆ ಸಂಪೂರ್ಣ ಸ್ಥಳಾಂತರವಾಗಿಲ್ಲ. 2018ರಲ್ಲಿ ಮತ್ತೆ ಯಶವಂತಪುರ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಲು ಅವಕಾಶ ನೀಡಲಾಯಿತು. ಸರ್ಕಾರದ ಮಾತು ನಂಬಿ ದಾಸನಪುರಕ್ಕೆ ಸ್ಥಳಾಂತರಗೊಂಡವರಿಗೆ ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಈಗ ಅವರಿಗೆ ಬಾಡಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಸರ್ಕಾರ ಬಾಡಿಗೆ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಸಚಿವ, ‘ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿನ ಒತ್ತಡ ಕಡಿಮೆ ಮಾಡಲು ಯಶವಂತಪುರ ಮಾರುಕಟ್ಟೆ ಆರಂಭಿಸಲಾಯಿತು. ಇಲ್ಲಿಗೆ ಪ್ರತಿ ದಿನ 400ರಿಂದ 500 ವಾಹನಗಳು ಬರುತ್ತಿದ್ದವು. ಅದನ್ನು ಕಡಿಮೆ ಮಾಡಲು ದಾಸನಪುರ ಮಾರುಕಟ್ಟೆ ನಿರ್ಮಿಸಲಾಗಿದೆ. ಅಲ್ಲಿ ಎಬಿಸಿಡಿ ಐದು ಅಂಕಗಳಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದ್ದು, ಆಲೂಗೆಡ್ಡೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ ವೇಳೆಗೆ ದಾಸನಪುರದಲ್ಲಿ ಬಾಕಿ ಇರುವ ಮಳಿಗೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ಯಶವಂತಪುರ ಮಾರುಕಟ್ಟೆ ಸ್ಥಳಾಂತರವಾಗಲಿದೆ. ಹೈಕೋರ್ಟ್ ಆದೇಶದಂತೆ 2018ರಲ್ಲಿ ಎರಡು ಕಡೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ’ ಎಂದರು.

‘ಸದ್ಯದ ನಿಯಮಗಳಲ್ಲಿ ಬಾಡಿಗೆ ಕಡಿಮೆ ಮಾಡಲು ಅವಕಾಶ ಇಲ್ಲ. ಈ ನಿಯಮಾವಳಿಯಲ್ಲಿ ಬದಲಾವಣೆ ಮಾಡಲು ಈ ಅಧಿವೇಶನದಲ್ಲೇ ಮಸೂದೆ ಮಂಡಿಸಲಾಗುವುದು. ಬಳಿಕ ಬಾಡಿಗೆ ಕಡಿಮೆ ಮಾಡಲು ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT