ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಮಾಸಾಶನ ಹೆಚ್ಚಳದ ಬಗ್ಗೆ ಸಿಎಂ ಜತೆ ಚರ್ಚೆ: ಸುನಿಲ್‌ಕುಮಾರ್‌

Last Updated 17 ಫೆಬ್ರುವರಿ 2022, 16:13 IST
ಅಕ್ಷರ ಗಾತ್ರ

ಬೆಂಗಳೂರು: ಕಲಾವಿದರಿಗೆ ಮಾಸಾಶನದ ಮೊತ್ತವನ್ನು ಹೆಚ್ಚಿಸುವ ಉದ್ದೇಶವಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಅವರ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಪ್ರತಿ ತಿಂಗಳಿಗೆ ₹2,000 ಮಾಸಾಶನ ನೀಡಲಾಗುತ್ತಿದೆ. ಮೊತ್ತವನ್ನು ಹೆಚ್ಚಿಸಬೇಕು ಎಂಬ ಉದ್ದೇಶವಿದೆ. ಇದಕ್ಕೆ ಅನುದಾನದ ಲಭ್ಯತೆಯನ್ನೂ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ವಿವಿಧ ಸಾಂಸ್ಕೃತಿಕ ಸಂಘಟನೆಗಳಿಗಾಗಿ ಅನುದಾನ ನೀಡಲು ವಾರ್ಷಿಕ ₹ 6 ಕೋಟಿ ನಿಗದಿ ಆಗಿದೆ. ರಂಗ ಶಿಕ್ಷಕರ ನೇಮಕಾತಿಗಾಗಿ ಶಿಕ್ಷಣ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದೂ ಸುನಿಲ್ ಭರವಸೆ ನೀಡಿದರು.

ರಾಜ್ಯದಲ್ಲಿ ಹಲಗೆ ಬಾರಿಸುವವರಿಂದ ಸಿತಾರ್‌ ನುಡಿಸುವ ಸುಮಾರು 15 ಸಾವಿರ ನೊಂದಾಯಿತ ಕಲಾವಿದರಿದ್ದಾರೆ. ಆದರೆ, ಸರ್ಕಾರದಲ್ಲಿ ಆ ಮಾಹಿತಿ ಇಲ್ಲ. ಇವರಿಗೆ ಈಗ ಕೊಡುತ್ತಿರುವ ಮಾಸಾಶನ ಏನಕ್ಕೂ ಸಾಲುವುದಿಲ್ಲ. ಆಂಧ್ರ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ತಿಂಗಳಿಗೆ ₹5 ಸಾವಿರ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಅದಕ್ಕೆ ಸರಿ ಸಮಾನವಾಗಿ ನೀಡಬೇಕು. ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 65 ರಂಗ ಶಿಕ್ಷಕರ ನೇಮಕ ಆಗಿತ್ತು. ಆ ಬಳಿಕ ರಂಗ ಶಿಕ್ಷಕರ ನೇಮಕ ನಿಂತು ಹೋಯಿತು. ಶಾಲೆಗಳಿಗೆ ರಂಗ ಶಿಕ್ಷಕರ ನೇಮಕಾತಿಯನ್ನು ಮತ್ತೆ ಆರಂಭಿಸಬೇಕು. ಎಂದು ಬಂಡೆಪ್ಪ ಕಾಶೆಂಪೂರ ಅವರು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಾಹಿತಿಗಳು ಮತ್ತು ಕಲಾವಿದರು ಈ ನಾಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದವರು. ಕಲಾವಿದರು ಈಗ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಅನುದಾನ ಪಡೆಯಬೇಕು ಎಂದು ಸಚಿವರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT