ಶನಿವಾರ, ಆಗಸ್ಟ್ 13, 2022
24 °C

ಖಾಸಗಿ ಶಾಲೆಗಳ ಶಿಕ್ಷಕರಿಗೆ ನೆರವು ನೀಡಲು ಬದ್ಧ: ಸಚಿವ ಸುರೇಶ್ ಕುಮಾರ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳ 3.5 ಲಕ್ಷ ಶಿಕ್ಷಕರಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಈ ಶಿಕ್ಷಕರಿಗೆ ಯಾವುದಾದರೂ ರೂಪದಲ್ಲಿ ನೆರವು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

'ಈಗಾಗಲೇ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಅವಕಾಶ ನೀಡಲಾಗಿದೆ. ಅದರ ಜತೆಯಲ್ಲೇ ಶಿಕ್ಷಕರಿಗೆ ಯಾವುದಾದರೂ ರೂಪದಲ್ಲಿ ನೆರವು ನೀಡಲು ಯೋಚಿಸಲಾಗುತ್ತಿದೆ. ನೆರವು ನೀಡುವುದು ಖಚಿತ' ಎಂದರು.

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಎಲ್ಲರೂ ಶಾಲೆಗಳ ಆರಂಭಕ್ಕೆ ಉತ್ಸುಕರಾಗಿದ್ದಾರೆ. ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕ ರಾಜ್ಯದಲ್ಲೂ ಶಾಲೆಗಳನ್ನು ಆರಂಭಿಸಲಾಗುವುದು ಎಂದರು.

34 ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಎಲ್ಲರನ್ನೂ ಒಳಗೊಂಡು ಈ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಒಳ್ಳೆಯ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕಳೆದ ವರ್ಷ ನೀಡಿದ್ದ ಭರವಸೆಯಂತೆ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ತರಲಾಗಿದೆ. ರಾಜ್ಯದ ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ಇಲಾಖೆ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 'ಕೊರೊನಾ ಸಂಕಷ್ಟದ ನಡುವೆಯೂ ಶಿಕ್ಷಕರು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಯಶಸ್ವಿಯಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ' ಎಂದು ಶ್ಲಾಘಿಸಿದರು.

ಹೆಚ್ಚಿನ ಸಂಖ್ಯೆಯ ಮಕ್ಕಳು ಸರ್ಕಾರಿ ಶಾಲೆಗಳತ್ತ ಬರುತ್ತಿರುವುದು ಸಂತೋಷದ ಬೆಳವಣಿಗೆ. ಶಿಕ್ಷಕರು ಸಹಬಾಳ್ವೆ, ಸೌಹಾರ್ದ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು‌ ಸಲಹೆ ನೀಡಿದರು.

ಸರ್ಕಾರದ ಶೈಕ್ಷಣಿಕ ಸಲಹೆಗಾರ ಎಂ.ಆರ್.ದೊರೆಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ, ಅ.ದೇವೇಗೌಡ, ಅರುಣ್ ಶಹಾಪುರ, ಹನುಮಂತ ನಿರಾಣಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು