ಸೋಮವಾರ, ಜೂನ್ 14, 2021
22 °C

ಶಾಲಾ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ: ಸುರೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ನೀಡಲು ಬಾಕಿ ಉಳಿದಿರುವ ಆಹಾರಧಾನ್ಯಗಳನ್ನು ಇದೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ಚರ್ಚಿಸಿದ ಬಳಿಕ ಮಾತನಾಡಿದ ಅವರು, ‘ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿದಂತೆ ಆಹಾರಧಾನ್ಯಗಳನ್ನು ಲಾಕ್‌ ಡೌನ್ ಅವಧಿ ಮುಗಿದ ತಕ್ಷಣ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರಧಾನ್ಯ ಕೆಎಸ್ಎಫ್‌ಸಿ ಗೋದಾಮುಗಳಲ್ಲಿ ಏಕಕಾಲದಲ್ಲಿ ಸಂಗ್ರಹಣೆ ಮಾಡಿ ಎತ್ತುವಳಿ ಮಾಡಲು ಕಷ್ಟ. ಹೀಗಾಗಿ, ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ, ಮೊದಲ ಹಂತದಲ್ಲಿ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. 2020ರ ನವೆಂಬರ್‌ನಿಂದ 2021ಮಾರ್ಚ್ ವರೆಗಿನ 132 ದಿನಗಳ ಆಹಾರಧಾನ್ಯಗಳನ್ನು ಕೆಲವು ಶಾಲೆಗಳಿಗೆ ವಿತರಿಸಲಾಗಿದೆ’ ಎಂದರು.

ಆರ್‌ಟಿಇ ಹಣ ಮರುಪಾವತಿಗೆ ಸೂಚನೆ: ‘ಆರ್‌ಟಿಇ ಹಣ ಮರುಪಾವತಿ ಬಾಕಿ ಇರುವ ಶಾಲೆಗಳಿಗೆ ಇದೇ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲು ಹಾಗೂ ಶಾಲೆಗಳಿಗೆ ನೀಡಬೇಕಾದ ಹಣವನ್ನು ತಮ್ಮ ಖಾತೆಯಲ್ಲಿ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದೂ ಹೇಳಿದರು.

ಬೆಂಗಳೂರು ವಿಭಾಗದ ದಾವಣಗೆರೆ, ಶಿವಮೊಗ್ಗ ಮತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ ಖಾಸಗಿ ಅನುದಾನರಹಿತ ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೂ ಸಚಿವರು ಸಭೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು