ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ಕಾರ್ಯವೈಖರಿ ತೃಪ್ತಿಕರ, ‘ಮಿಷನ್‌ ರಿಪೀಟ್‌’ ನಮ್ಮ ಗುರಿ: ನಡ್ಡಾ

Last Updated 17 ಏಪ್ರಿಲ್ 2022, 11:11 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಅವಧಿಯಲ್ಲಿ ಕರ್ನಾಟಕ ಸುವರ್ಣ ಯುಗ ಕಂಡಿದೆ. ನಮ್ಮ ಸಾಧನೆಗಳ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದರ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಬದಲಾವಣೆಗೆ ಕರ್ನಾಟಕ ನಾಂದಿ ಹಾಡಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆ ನೀಡಿದರು.

ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ರಾಜ್ಯ, ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳ ಪಟ್ಟಿ ಮಾಡಿದರು. ಕಾಂಗ್ರೆಸ್‌, ಎಎಪಿ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಕಾರ್ಯವೈಖರಿ ತೃಪ್ತಿ ನೀಡಿದೆ. ಬರುವ ದಿನಗಳಲ್ಲಿ ‘ಮಿಷನ್‌ ರಿಪೀಟ್‌’ ಗುರಿಯೊಂದಿಗೆ ಕೆಲಸ ಮಾಡಬೇಕು. ರಾಷ್ಟ್ರ ಮೊದಲು, ಪಕ್ಷ ನಂತರ, ವೈಯಕ್ತಿಕ ವಿಚಾರಗಳು ಅಂತಿಮ ಎನ್ನುವುದರಲ್ಲಿ ಬಿಜೆಪಿ ಬಲವಾದ ವಿಶ್ವಾಸ ಹೊಂದಿದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಿದರೆ ಭಾರತ ಮುಂದುವರೆಯಲು ಸಾಧ್ಯ. ನಮ್ಮ ಗುರಿ ಬಹಳ ಸ್ಪಷ್ಟವಾಗಿದೆ. ನಮಗೆ ಜಯದ ಭರವಸೆ ಇದೆ ಎಂದರು.

ಉತ್ತರದ ಕಾಶ್ಮೀರದಿಂದ, ದಕ್ಷಿಣದ ಕರ್ನಾಟಕದ ವರೆಗಿನ ಎಲ್ಲ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿವೆ. ಯಾವುದೇ ಪಕ್ಷವೂ ಸಿದ್ಧಾಂತ ಉಳಿಸಿಕೊಂಡಿಲ್ಲ. ಆದರೆ, ಬಿಜೆಪಿ ಅವುಗಳಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಬಿಜೆಪಿ ಎಲ್ಲರ ವಿಶ್ವಾಸ ಗಳಿಸಿ ಮುನ್ನಡೆಯುತ್ತಿದೆ. ಬಿಜೆಪಿಯಲ್ಲಿ ನಾಯಕರು, ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಆ ಶಕ್ತಿಯೊಂದಿಗೆ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.

ಬಡವರು, ಶೋಷಿತರು, ಹಿಂದುಳಿದವರು, ಸಮಾಜದ ಮುಖ್ಯವಾಹಿನಿಂದ ದೂರ ಉಳಿದವರು, ಮಹಿಳೆಯರು ಸೇರಿದಂತೆ ದುರ್ಬಲ ವರ್ಗದವರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ. ಆ ಮೂಲಕ ಅವರಿಗೆ ಘನತೆಯ ಬದುಕು ಕಟ್ಟಿಕೊಡಬೇಕು. ಕಾಂಗ್ರೆಸ್‌ ಪಕ್ಷ ಕಳೆದ 70 ವರ್ಷಗಳಲ್ಲಿ ಜನರಿಗೆ ಘನತೆಯ ಬದುಕು ಕಟ್ಟಿಕೊಟ್ಟಿಲ್ಲ. ಶೌಚಾಲಯ ನಿರ್ಮಾಣ, ಉಜ್ವಲ, ಜಲಜೀವನ್ ಮಿಷನ್‌ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ನಮ್ಮದು ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸಮಾರೋಪ ಸಮಾರಂಭದಲ್ಲಿ ಜೆ.ಪಿ ನಡ್ಡಾ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸಮಾರೋಪ ಸಮಾರಂಭದಲ್ಲಿ ಜೆ.ಪಿ ನಡ್ಡಾ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ, ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಕ್ಷದ ಸಹ ಕಾರ್ಯದರ್ಶಿ ಡಿ.ಕೆ. ಅರುಣಾ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದರು.

ಮುಂದಿನ ಕಾರ್ಯಕಾರಿಣಿ ಬೆಂಗಳೂರಿನಲ್ಲಿ

ಮುಂದಿನ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಜುಲೈ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸಮಾರೋಪ ಭಾಷಣದಲ್ಲಿ ಪ್ರಕಟಿಸಿದರು.

‘ಬೂತ್‌ಮಟ್ಟದಿಂದ ಕಾಂಗ್ರೆಸ್‌ ಮುಕ್ತ’

‘ಬೂತ್‌ಮಟ್ಟದಿಂದ ಕಾಂಗ್ರೆಸ್‌ ಪಕ್ಷವನ್ನು ಮುಕ್ತ ಮಾಡುವುದು ಬಿಜೆಪಿಯ ಮುಂದಿನ ಗುರಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು.

ಬಿಜೆಪಿ ಕಾರ್ಯಕಾರಿಣಿಯ ಸಮಾರೋಪದಲ್ಲಿ ಮಾತನಾಡಿದ ಅವರು, ಡಿ.ಜೆ.ಹಳ್ಳಿ, ಕೆ.ಜೆ. ಹಳ್ಳಿ ಘಟನೆಯ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ. ಪೊಲೀಸರ ಮೇಲೆ ಮತಾಂಧ ಶಕ್ತಿಗಳು ದಾಳಿ ನಡೆಸಿದ್ದಾರೆ. ಆ ಶಕ್ತಿಗಳ ಹಿಂದೆ ಕಾಂಗ್ರೆಸ್‌ ಕೈವಾಡವಿದೆ. ಅದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು.

‘ಮತಾಂಧ ಶಕ್ತಿಗಳ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ. ಒಂದು ವಾಟ್ಸ್ಯಾಪ್‌ ಸಂದೇಶ ಆಧರಿಸಿ ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಸರಿಯಿಲ್ಲ’ ಎಂದರು.

***

ಕಾಂಗ್ರೆಸ್‌ ಭಾಯಿ–ಬೆಹೆನ್‌ಜೀ ಪಕ್ಷವಾಗಿ ಉಳಿದಿದೆ. ಆದರೆ, ಬಿಜೆಪಿ ಹಾಗಿಲ್ಲ. ನಾಯಕರು, ಕಾರ್ಯಕರ್ತರ ದೊಡ್ಡ ಪಡೆಯೇ ಇದೆ.
–ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT