ಬುಧವಾರ, ಆಗಸ್ಟ್ 17, 2022
23 °C
ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಯುವರಾಜ್ ಮೇಲೆ ಶಂಕೆ?

ಜೈಲಿನಿಂದ ಬೆಲ್ಲದಗೆ ಕರೆ: ತನಿಖೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜೈಲಿನಿಂದ ಎರಡು–ಮೂರು ಬಾರಿ ಕರೆಗಳು ಬಂದಿದ್ದವು. ಅಪರಿಚಿತರು ನನ್ನ ಮೊಬೈಲ್ ಕದ್ದಾಲಿಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹುಬ್ಬಳ್ಳಿ– ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ನೀಡಿರುವ ದೂರು ಆಧರಿಸಿ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಬೆಲ್ಲದ ದೂರು ಕಳುಹಿಸಿದ್ದರು. ಅದನ್ನು ನಗರ ಕಮಿಷನರ್ ಕಮಲ್ ಪಂತ್‌ ಅವರಿಗೆ ಕಳುಹಿಸಿರುವ ಸೂದ್, ತನಿಖೆ ನಡೆಸಲು ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಮಲ್ ಪಂತ್, ‘ದೂರಿನ ಬಗ್ಗೆ ವಿಚಾರಣೆ ನಡೆಸಲು ಕೇಂದ್ರ ವಿಭಾಗದ ಡಿಸಿಪಿಗೆ ಸೂಚಿಸಿದ್ದೇನೆ. ಎಸಿಪಿ ನೇತೃತ್ವದ ತಂಡ ಮಾಹಿತಿ ಕಲೆಹಾಕುತ್ತಿದೆ’ ಎಂದರು.

ವಂಚನೆ ಆರೋಪಿ ಶಂಕೆ: ‘ವಂಚನೆ ಆರೋಪದಡಿ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು, ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.  ಆತನೇ, ಬೆಲ್ಲದ ಅವರಿಗೆ ಎರಡು–ಮೂರು ಬಾರಿ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಕರೆ ಮಾಡಿರುವ ಶಂಕೆ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದೂರಿನಲ್ಲಿರುವ ವಿಷಯಗಳಿಗೆ ಸಂಬಂಧಪಟ್ಟ ಪುರಾವೆಗಳು ಸಿಕ್ಕ ಬಳಿಕ ಎಫ್‌ಐಆರ್ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು. ಕಬ್ಬನ್‌ ಪಾರ್ಕ್ ಉಪವಿಭಾಗ ಎಸಿಪಿ ಯತಿರಾಜ್ ನೇತೃತ್ವದ ತಂಡ,  ಬೆಲ್ಲದ ಅವರನ್ನು ಭೇಟಿಯಾಗಿ ಮಾಹಿತಿ ಪಡೆದಿದೆ’ ಎಂದರು.

ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದ ‘ಎಸಿಪಿ’:

ಅರವಿಂದ್ ಬೆಲ್ಲದ ಕರೆ ಕದ್ದಾಲಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸಿಪಿ ಯತಿರಾಜ್, ಈ ಹಿಂದೆ ಸಿಸಿಬಿಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದಿದ್ದ ಕರೆಗಳ ಕದ್ದಾಲಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಅಂತಿಮ ಪಟ್ಟಿ ಸಲ್ಲಿಕೆ ಬಾಕಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು