ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಗೌರಿಶಂಕರ್ ಚುನಾವಣಾ ಅಕ್ರಮ ಆರೋಪ: ಹೈಕೋರ್ಟ್‌ಗೆ ದಾಖಲೆ ಸಲ್ಲಿಕೆ

Last Updated 22 ಜೂನ್ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ‘ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹದಿನಾರು ಸಾವಿರ ಮಕ್ಕಳ ಆರೋಗ್ಯ ವಿಮೆಯನ್ನು ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ ವತಿಯಿಂದ ಸುಮಾರು ಆರು ಲಕ್ಷ ಹಣ ನೀಡಿ ಪಡೆಯಲಾಗಿದೆ ಮತ್ತು ಚುನಾವಣಾ ಸಂದರ್ಭದಲ್ಲಿ ನಕಲಿ ಬಾಂಡ್‌ಗಳನ್ನು ಹಂಚಿ ಗೌರಿಶಂಕರ್‌ ಚುನಾವಣಾ ಅಪರಾಧ ಎಸಗಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಯಿತು.

‘ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿಪರಾಜಿತ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಸುರೇಶ್‌ ಗೌಡ ‍ಪರ ವಾದ ಮುಂದುವರಿಸಿದ ಹಿರಿಯ ವಕೀಲೆ ನಳಿನಾ ಮಾಯೇಗೌಡ,ಗೌರಿಶಂಕರ್ 2018ರ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನಕಲಿ ಬಾಂಡ್‌ ಹಂಚಿರುವ ಆರೋಪಕ್ಕೆ ಸಂಬಂಧಿಸಿದಂತೆ ರಮೇಶ್ ಬೆಟ್ಟಯ್ಯ ನೀಡಿದ್ದ ದೂರಿನನ್ವಯ ಇನ್ಶೂರೆನ್ಸ್ ಕಂಪನಿ ಆರೋಗ್ಯ ವಿಮೆಯನ್ನು ರದ್ದುಗೊಳಿಸಿದ್ದ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಾದರಪಡಿಸಿದರು.

ವಿಮಾಕಂತನ್ನು ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿಯವರೇ ಭರಿಸಿದ್ದು, ವಿಮಾ ಪಾಲಿಸಿ ರದ್ದಾದ ನಂತರ ವಿಮಾ ಕಂತಿನ ಹಣವನ್ನು, ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿಯವರಿಗೆ ಹಿಂದಿರುಗಿಸಲಾಗಿದೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ನ್ಯಾಯಪೀಠಕ್ಕೆ ನೀಡಿದರು. ವಾದ ಮಂಡನೆ ಅಪೂರ್ಣಗೊಂಡಿದ್ದು, ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಲಾಗಿದೆ.

ಕೋರಿಕೆ ಏನು?: ‘2018ರ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌರಿಶಂಕರ್ ವ್ಯಾಪಕ ಚುನಾವಣಾ ಅಕ್ರಮ ಎಸಗಿ ಆಯ್ಕೆಯಾಗಿದ್ದಾರೆ. ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ 123 ಅನ್ನು ಉಲ್ಲಂಘಿಸಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮತದಾರರಿಗೆ ಮತಯಾಚನೆ ಪತ್ರದ ಜೊತೆ ಗುಂಪು ಆರೋಗ್ಯ ವಿಮಾ ಪಾಲಿಸಿಯ ಆಮಿಷವೊಡ್ಡಿ ಅವರಿಂದ ಮತಗಳನ್ನು ಪಡೆದು ಆರಿಸಿ
ಬಂದಿದ್ದಾರೆ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು’ ಎಂದು ಅರ್ಜಿದಾರ ಸುರೇಶ್‌ಗೌಡ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT