ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್: 3 ಪಕ್ಷಗಳಿಗೆ ‘ಚಳವಳಿ’ಗಳ ಸವಾಲು

ದಕ್ಷಿಣ ಪದವೀಧರರ ಕ್ಷೇತ್ರಕ್ಕಾಗಿ ಚತುಷ್ಕೋನ ಹೋರಾಟ
Last Updated 9 ಜೂನ್ 2022, 19:48 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯು ‘ಹೊಸ ಪ್ರಯೋಗ’ದ ಕಾರಣದಿಂದಾಗಿ ಗಮನ ಸೆಳೆದಿದೆ. ಮೂರು ಪ್ರಮುಖ ಪಕ್ಷಗಳ ಎದುರು ರೈತ–ದಲಿತ ಚಳವಳಿಗಳ ಮುಖಂಡರು ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಫಸಲು ತೆಗೆಯಲು ಮುಂದಾಗಿದ್ದಾರೆ.

ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ವಿರುದ್ಧ ರಾಜ್ಯ ರೈತ ಸಂಘ, ಸ್ವರಾಜ್‌ ಇಂಡಿಯಾ ಸೇರಿದಂತೆ ವಿವಿಧ 18 ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಅಭ್ಯರ್ಥಿಯನ್ನು ಹಾಕಿವೆ. ಪ್ರತಿಯಾಗಿ ಪ್ರಗತಿಪರ ಸಂಘಟನೆಗಳು ಒಕ್ಕೂಟದ ರೀತಿ ಕೈಜೋಡಿಸಿವೆ.ಅಭ್ಯರ್ಥಿಗಳು ಪಕ್ಷದ ವರ್ಚಸ್ಸಿನ ಜೊತೆಗೆ ವೈಯಕ್ತಿಕ ವರ್ಚಸ್ಸನ್ನೂ ಪಣಕ್ಕಿಟ್ಟಿದ್ದಾರೆ.

ಜೆಡಿಎಸ್‌ನಿಂದ ಎಚ್‌.ಕೆ.ರಾಮು, ಬಿಜೆಪಿಯಿಂದ ಮೈ.ವಿ.ರವಿಶಂಕರ್, ಕಾಂಗ್ರೆಸ್‌ನಿಂದ ಮಧು ಜಿ.ಮಾದೇಗೌಡ, ಚಳವಳಿಗಳ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಸೇರಿದಂತೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 13ರಂದು ನಡೆಯಲಿರುವ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಚತುಷ್ಕೋನ ಹಣಾಹಣಿ ಕಂಡುಬಂದಿದೆ.

‘ಭದ್ರ ನೆಲೆಯ ಕ್ಷೇತ್ರ’ ಉಳಿಸಿಕೊಳ್ಳಲು ಜೆಡಿಎಸ್‌ ಶ್ರಮಿಸುತ್ತಿದ್ದರೆ, ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿದೆ. ಖಾತೆ ತೆರೆಯಲು ಕಾಂಗ್ರೆಸ್‌ ಎಂದಿನಂತೆ ಹರಸಾಹಸಪಡುತ್ತಿದೆ. ರೈತ–ದಲಿತ–ಪ್ರಗತಿಪರ ಚಳವಳಿಗಳ ನಾಯಕರ ಬೆಂಬಲದಿಂದ ಪ್ರಸನ್ನ ಪೈಪೋಟಿ ಕೊಡುತ್ತಿದ್ದಾರೆ.

ಎಲ್ಲ ವ್ಯವಸ್ಥಿತ: ಕಳೆದ ಬಾರಿ ಎರಡನೇ ಸ್ಥಾನ ಗಳಿಸಿದ್ದ ರವಿಶಂಕರ್‌ ಪರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ತಳಮಟ್ಟದಿಂದ ಪ್ರಚಾರ ನಡೆಸಿ, ಮತದಾರರನ್ನು ‘ವ್ಯವಸ್ಥಿತವಾಗಿ’ ತಲುಪುತ್ತಿದ್ದಾರೆ.

ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ ಅವರು ಮಂಡ್ಯ ಜಿಲ್ಲೆಯ ಪ್ರಭಾವಿ ರೈತ ಹೋರಾಟಗಾರರಾಗಿದ್ದ ದಿವಂಗತ ಡಿ.ಮಾದೇಗೌಡ ಅವರ ಪುತ್ರ ಎನ್ನುವುದು ಪ್ಲಸ್ ಪಾಯಿಂಟ್. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಇಲ್ಲೂ ‍ಪ್ರಚಾರದ ಅಬ್ಬರ ಜೋರಾಗಿದೆ. ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಬಹಿರಂಗವಾಗಿ ಬೆಂಬಲ ಘೋಷಿಸಿ ರುವುದು ಕಾಂಗ್ರೆಸ್‌ ಪಾಳೆಯದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.

ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿರುವ ಪ್ರಸನ್ನ ಅವರನ್ನು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಚಿಂತಕ ದೇವನೂರ ಮಹಾದೇವ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಸೇರಿ ಸಮಾನ ಮನಸ್ಕ ಮುಖಂಡರು, ಹೋರಾಟಗಾರರು ಬೆಂಬಲಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ನಾಡಿಮಿಡಿತ ಅರಿಯಲೆಂದೇ ಪ್ರಯೋಗ ನಡೆದಿದೆ.

ಕ್ಷೇತ್ರದಲ್ಲಿ ಜನಸಂಘ, ಬಿಜೆಪಿ ಮತ್ತು ಜೆಡಿಎಸ್‌ ಮಾತ್ರವೇ ಗೆದ್ದಿವೆ. ಕಾಂಗ್ರೆಸ್ ಖಾತೆ ತೆರೆದಿಲ್ಲ.

ಕಣದಲ್ಲಿ ಯಾರ‍್ಯಾರು?
ಮೈ.ವಿ. ರವಿಶಂಕರ್(ಬಿಜೆಪಿ), ಮಧು ಜಿ.ಮಾದೇಗೌಡ(ಕಾಂಗ್ರೆಸ್‌), ಎಚ್‌.ಕೆ.ರಾಮು(ಜೆಡಿಎಸ್‌), ರಫತ್‌ ಉಲ್ಲಾ ಖಾನ್‌(ಎಸ್‌ಡಿಪಿಐ), ವಾಟಾಳ್‌ ನಾಗರಾಜ್(ಕನ್ನಡ ಚಳವಳಿ ವಾಟಾಳ್‌ ಪಕ್ಷ)ಮತ್ತು ಎನ್‌.ವೀರಭದ್ರಸ್ವಾಮಿ(ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ), ಡಾ.ಬಿ.ಎಚ್‌. ಚನ್ನಕೇಶವಮೂರ್ತಿ, ಡಾ.ಜೆ. ಅರುಣ್‌ಕುಮಾರ್, ಸಿ.ಕಾವ್ಯಶ್ರೀ, ಪುಟ್ಟಸ್ವಾಮಿ, ಎನ್. ಪ್ರಸನ್ನ ಗೌಡ, ಕೆ.ಪಿ. ಪ್ರಸನ್ನಕುಮಾರ್, ಎಂ.ಮಹೇಶ್, ಡಾ.ಜೆ.ಸಿ. ರವೀಂದ್ರ, ಎಸ್.ರಾಮು, ಎನ್. ರಾಜೇಂದ್ರಸಿಂಗ್ ಬಾಬು, ಎನ್.ಎಸ್. ವಿನಯ್, ಎಚ್‌.ಎಲ್. ವೆಂಕಟೇಶ ಮತ್ತು ಎಚ್‌.ಪಿ. ಸುಜಾತಾ(ಪಕ್ಷೇತರರು).

‘ಒಳಗಿನ ಶತ್ರು’ಗಳೇ ಜೆಡಿಎಸ್‌ಗೆ ಮುಳ್ಳು
ನಾಲ್ಕೂ ಜಿಲ್ಲೆಗಳ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುತ್ತಿರುವ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿರುವುದು ಪಕ್ಷಕ್ಕೆ ಆಘಾತ ತಂದೊಡ್ಡಿದೆ. ಟಿಕೆಟ್‌ ನಿರೀಕ್ಷಿಸಿದ್ದ ಮುಖಂಡ ಕೀಲಾರ ಜಯರಾಂ ಕೂಡ ಅಸಹಕಾರ ನೀಡಿದ್ದರಿಂದ, ಒಳಗಿನ ಶತ್ರುಗಳೇ ಮುಳ್ಳಾಗಿ ಪರಿಣಮಿಸಿದ್ದಾರೆ. ಹಾಲಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಬದಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್‌.ಕೆ. ರಾಮು ಅವರಿಗೆ ಮಣೆ ಹಾಕಿರುವುದು ಇದಕ್ಕೆ ಕಾರಣ. ಸರ್ಕಾರಿ ನೌಕರರೊಂದಿಗೆ ಅವರ ಒಡನಾಟ ಹಾಗೂ ಕ್ಷೇತ್ರದಲ್ಲಿ ಪಕ್ಷದ ‘ಭದ್ರ ನೆಲೆ’ಯೂ ನೆರವಾಗಲಿದೆ ಎಂಬ ಲೆಕ್ಕಾಚಾರ ವರಿಷ್ಠರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT