ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ‘ಪದವಿ’ಗಾಗಿ ನಿರಾಣಿ, ಸಂಕ ನೇರ ಪೈಪೋಟಿ

ವಾಯವ್ಯ ಪದವೀಧರ ಕ್ಷೇತ್ರ
Last Updated 10 ಜೂನ್ 2022, 18:05 IST
ಅಕ್ಷರ ಗಾತ್ರ

ವಿಜಯಪುರ: ವಿಧಾನ ಪರಿಷತ್‌ ವಾಯವ್ಯ ಪದವೀಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಸುನೀಲ ಸಂಕ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಒಳಗೊಂಡಿರುವ ಪದವೀಧರ ಮತಕ್ಷೇತ್ರಕ್ಕೆ ಜೂನ್‌ 13ರಂದು ನಡೆಯುವ ಚುನಾವಣಾ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಇದ್ದಾರೆ. ಜೆಡಿಎಸ್‌ ಸ್ಪರ್ಧೆಯಿಂದ ದೂರ ಸರಿದಿದೆ.

ಹನುಮಂತ ನಿರಾಣಿ ಅವರು ಎರಡನೇ ಬಾರಿಗೆ ಪರಿಷತ್‌ ಪ್ರವೇಶಿಸಲು ತಳಮಟ್ಟದಿಂದಲೇ ಪ್ರಬಲ ಸ್ಪರ್ಧೆ ನಡೆಸಿದ್ದಾರೆ. ಸುನೀಲ ಸಂಕ ಅವರು ಪ್ರಬಲ ಸ್ಪರ್ಧಿಯಲ್ಲದಿದ್ದರೂ ನಿರಾಣಿಗೆ ತಡೆವೊಡ್ಡಲು ಪ್ರತಿತಂತ್ರ ಹೆಣೆದಿದ್ದಾರೆ. ಇಬ್ಬರ ನಡುವಿನ ನೇರ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ.

ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಪ್ರಭಾವ, ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮಾಜದ ಮತದಾರರು, ಆರ್ಥಿಕ ಸಂಪನ್ಮೂಲ ಹಾಗೂ ಕ್ಷೇತ್ರದಲ್ಲಿ ಪ್ರಬಲ ಬಿಜೆಪಿ ಕಾರ್ಯಪಡೆ ಮತ್ತು ಆಡಳಿತ ಪಕ್ಷದ ಪ್ರಭಾವ ಹನುಮಂತ ನಿರಾಣಿ ಬೆಂಬಲಕ್ಕೆ ನಿಂತಿದೆ. ಅಲ್ಲದೇ, ಕಳೆದ ಅವಧಿಯಲ್ಲಿ ನಿರಾಣಿಯವರು ಕ್ಷೇತ್ರದಾದ್ಯಂತ ಅಡ್ಡಾಡಿ, ವಿಧಾನ ಪರಿಷತ್‌ನಲ್ಲೂ ಪದವೀಧರರ ಧ್ವನಿಯಾಗಿ ಸ್ಪಂದಿಸಿದ್ದಾರೆ. ನಿರಾಣಿ ಸಮೂಹ ಸಂಸ್ಥೆಯೊಂದರಲ್ಲೇ ಸುಮಾರು 50 ಸಾವಿರ ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ಕಲ್ಪಿಸಿದ್ದು, ಚುನಾವಣೆಯಲ್ಲಿ ನೆರವಿಗೆ ಬರಲಿದೆ ಎಂಬುದು ಲೆಕ್ಕಾಚಾರ. ಈ ಹಿನ್ನೆಲೆಯಲ್ಲೇ ನಿರಾಣಿ ಅವರು ಎರಡನೇ ಬಾರಿಗೆ ಮೇಲ್ಮನೆ ಪ್ರವೇಶಿಸುವುದು ಖಚಿತ ಎಂಬ ದೃಢ ವಿಶ್ವಾಸದಲ್ಲಿ ಇದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಸುನೀಲ ಸಂಕ ಅವರಿಗೆ ಸ್ವಂತ ಜಿಲ್ಲೆಯಲ್ಲಿ ಇರುವ ಅಧಿಕ ಪದವೀಧರ ಮತದಾರರು ಕೈ ಹಿಡಿಯುತ್ತಾರೆ ಎಂಬ ನಂಬಿಕೆ. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಬೆನ್ನಿಗಿರುವುದು ಚುನಾವಣೆಯಲ್ಲಿ ಗೆಲುವಿನ ದಡ ಸೇರಲು ಅನುಕೂಲವಾಗಲಿದೆ ಎಂಬುದು ಲೆಕ್ಕಾಚಾರ. ಆದರೆ, ಸಂಕ ಅವರು ಕ್ಷೇತ್ರಕ್ಕೆ ಹೊಸಬರು, ಅಲ್ಲದೇ, ಮತದಾರರನ್ನು ತಲುಪುವಲ್ಲೂ ಹಿಂದೆ ಬಿದ್ದಿರುವುದು ಅವರಿಗೆ ಮೈನಸ್‌ ಆಗಲಿದೆ ಎಂಬ ರಾಜಕೀಯ ವಿಶ್ಲೇಷಣೆಯೂ ನಡೆದಿದೆ. ಕಣದಲ್ಲಿರುವ ಉಳಿದ ಒಂಬತ್ತು ಅಭ್ಯರ್ಥಿಗಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದೆ.

ಪದವೀಧರ ಕ್ಷೇತ್ರದ ಹಿನ್ನೆಲೆ:1956ರಿಂದ ಇಲ್ಲಿವರೆಗೆ ನಡೆದಿರುವ ಚುನಾವಣೆಯಲ್ಲಿ ಕೇವಲ ನಾಲ್ಕು ಜನ ಮಾತ್ರಈ ಕ್ಷೇತ್ರವನ್ನು ಪ್ರತಿನಿಧಿಸಿರುವುದು ವಿಶೇಷ.

ಆರಂಭದಲ್ಲಿ ಶಂಕರರಾವ್‌ ಏಡಕೆ ಮೂರು ಬಾರಿ(1956, 1962,1968) ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಿ.ಕೆ.ಗುಡದಿನ್ನಿ ಎರಡು ಬಾರಿ (1974,1980), ಡಾ.ಎಂ.ಪಿ.ನಾಡಗೌಡ ನಾಲ್ಕು ಬಾರಿ (1986, 1992,1998,2004) ಹಾಗೂ ಮಹಾಂತೇಶ ಕೌಜಲಗಿ (2010) ಮತ್ತು ಹನುಮಂತ ನಿರಾಣಿ ಅವರು ತಲಾ ಒಮ್ಮೆ(2016) ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇದೀಗ ಹನುಮಂತ ನಿರಾಣಿ ಅವರು ಪುನರ್‌ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.

ಬಿ.ಕೆ.ಗುಡದಿನ್ನಿ, ಡಾ.ಎಂ.ಪಿ.ನಾಡಗೌಡ, ಹನುಮಂತ ನಿರಾಣಿ ಅವರು ಬಾಗಲಕೋಟೆ ಜಿಲ್ಲೆಯವರು ಎಂಬುದು ಮತ್ತೊಂದು ವಿಶೇಷ.ಈ ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿರುವವರಲ್ಲಿ ಬೆಳಗಾವಿಯ ಶಂಕರರಾವ್‌ ಏಡಕೆ(ಸ್ವಕುಳ ಸಾಳಿ ಸಮಾಜ) ಅವರನ್ನು ಹೊರತು ಪಡಿಸಿ ಉಳಿದ ಮೂವರೂ ಪಂಚಮಸಾಲಿ ಸಮಾಜದವರು. ಒಟ್ಟಾರೆ ಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರ ಹಿಡಿತ ಹೆಚ್ಚಿದೆ.

ಮತದಾರರ ಸಂಖ್ಯೆ ಇಳಿಕೆ:ವಾಯವ್ಯ ಪದವೀಧರ ಕ್ಷೇತ್ರಕ್ಕೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಹನುಮಂತ ನಿರಾಣಿ 43,605 ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ 23,518, ಜೆಡಿಯುನ ಡಾ.ಎಂ.ಪಿ.ನಾಡಗೌಡ 3,536 ಮತಗಳನ್ನು ಗಳಿಸಿದ್ದರು.

2016ರಲ್ಲಿ ಒಟ್ಟು 1,79,110 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ 99,597 ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಸಂಖ್ಯೆ ಗಣನೀಯ (79,513) ಇಳಿಕೆಯು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

****

ಕಣದಲ್ಲಿರುವ ಅಭ್ಯರ್ಥಿಗಳು

ಅಭ್ಯರ್ಥಿಗಳು; ಪಕ್ಷ
ಹನುಮಂತ ನಿರಾಣಿ;
ಬಿಜೆಪಿ
ಸುನೀಲ ಸಂಕ; ಕಾಂಗ್ರೆಸ್‌
ಜಿ.ಸಿ.ಪಾಟೀಲ; ಸರ್ವಜನತಾ ಪಾರ್ಟಿ
ಯಲ್ಲಪ್ಪ ಕಲಕುಟ್ರಿ; ಕರ್ನಾಟಕ ರಾಷ್ಟ್ರ ಸಮಿತಿ‌
ಆದರ್ಶಕುಮಾರ ಪೂಜಾರಿ; ಪಕ್ಷೇತರ
ಘಟಿಗೆಪ್ಪ ಮಗದುಮ್‌: ಪಕ್ಷೇತರ
ದೀಪಿಕಾ ಎಸ್‌; ಪಕ್ಷೇತರ
ನಿಂಗಪ್ಪ ಭಜಂತ್ರಿ; ಪಕ್ಷೇತರ
ಭೀಮಸೇನ ಬಾಗಿ: ಪಕ್ಷೇತರ
ರಾಜನಗೌಡ ಪಾಟೀಲ: ಪಕ್ಷೇತರ
ಸುಭಾಶ ಕೋಟೆಕಲ್‌; ಪಕ್ಷೇತರ

****

ಮತದಾರರ ಸಂಖ್ಯೆ
ಪುರುಷ
; 71,040
ಮಹಿಳೆ; 28,553
ಇತರೆ; 04
ಒಟ್ಟು; 99,597

–––––––––

ವಿಜಯಪುರ ಜಿಲ್ಲೆ
ಪುರುಷರು
; 15,222
ಮಹಿಳೆಯರು; 5100
ಇತರೆ; 01
ಒಟ್ಟು; 20,823

––––––––

ಬಾಗಲಕೋಟೆ ಜಿಲ್ಲೆ
ಪುರುಷರು
; 24,327
ಮಹಿಳೆಯರು; 9,322
ಇತರೆ; 02
ಒಟ್ಟು; 33,651

––––––––––

ಬೆಳಗಾವಿ ಜಿಲ್ಲೆ
ಪುರುಷರು
; 33,991
ಮಹಿಳೆಯರು; 14,132
ಇತರೆ; 01
ಒಟ್ಟು; 45,124

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT