ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ: ಹೊರಟ್ಟಿಗೆ ಕೈಕೊಟ್ಟ ಬಿಜೆಪಿ?

Last Updated 19 ಸೆಪ್ಟೆಂಬರ್ 2022, 4:58 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ತ್ಯಜಿಸಿ ಬಂದರೆ ಮತ್ತೆ ವಿಧಾನ ಪರಿಷತ್‌ ಸಭಾಪತಿ ಪಟ್ಟ ನೀಡುವುದಾಗಿ ಬಸವರಾಜ ಹೊರಟ್ಟಿ ಅವರಿಗೆ ಭರವಸೆ ನೀಡಿದ್ದ ಬಿಜೆಪಿ, ಇದೀಗ ತನ್ನ ವಾಗ್ದಾನದಿಂದ ಹಿಂದಕ್ಕೆ ಸರಿದಿದೆ.

ಇದೇ 21ರಂದು ನಡೆಯಬೇಕಿದ್ದ ಸಭಾಪತಿ ಚುನಾವಣೆಯನ್ನು ಮುಂದೂ ಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೂಚಿಸಿದ್ದಾರೆಂದು ಗೊತ್ತಾಗಿದೆ.

ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಸಿದ್ಧತೆಗೂ ಹೊರಟ್ಟಿ ಅವರಿಗೆ ಸೂಚಿಸಲಾಗಿತ್ತು. ಈ ಮಧ್ಯೆಯೇ ಚುನಾವಣೆ ಮುಂದೂಡಿಕೆಯಾಗಿದೆ.

ಚುನಾವಣೆಗೆ ಅಧಿಸೂಚನೆ ಹೊರಡಿಸಲು ರಾಜ್ಯಪಾಲರಿಗೆ ಕಡತ ರವಾನಿಸಬೇಕು ಎನ್ನುವಷ್ಟ ರಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕರೆ ಮಾಡಿದ್ದ ಕಟೀಲ್‌, ಸಭಾಪತಿ ಆಯ್ಕೆ ಪ್ರಕ್ರಿಯೆ ಮುಂದೂಡಲು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಗೆ ಸೂಚಿಸಲು ತಿಳಿಸಿದ್ದರು. ಅದರಂತೆ ಕರೆ ಮಾಡಿದಾಗ, ‘ಸಂಪುಟದ ತೀರ್ಮಾನ ಮುಂದೂಡಿಕೆ ಸರಿಯಲ್ಲ‌’ ಎಂದು ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ.

‘ಆ ಬಳಿಕ ಸಿ.ಎಂಗೆ ಕಟೀಲ್‌ ಕರೆ ಮಾಡಿದ್ದಾರೆ. ಅದರಂತೆ, ಮಾಧು ಸ್ವಾಮಿಗೆ ಕರೆ ಮಾಡಿದ್ದ ಬೊಮ್ಮಾಯಿ, ಪಕ್ಷದ ಸೂಚನೆಯಂತೆ ಮುಂದೂಡಲು ಸೂಚಿಸಿದರು ಎನ್ನಲಾಗಿದೆ. ಬಿಜೆಪಿಯವರನ್ನೇ ಸಭಾಪತಿ ಮಾಡಲು ಯತ್ನ ನಡೆದಿದೆ. ಅದಕ್ಕೆ ಚುನಾವಣೆ ಮುಂದೂಡಿಕೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಪರಿಷತ್‌ ಸದಸ್ಯವೈ.ಎ.ನಾರಾಯಣಸ್ವಾಮಿ, ಇತರರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನೂ ಭೇಟಿ ಮಾಡಿ ಮೂಲ ಬಿಜೆಪಿಯವರಿಗೇ ಸಭಾಪತಿ ಸ್ಥಾನ ನೀಡುವಂತೆ ಒತ್ತಾಯಿಸಿದರು ಎಂದೂ ಗೊತ್ತಾಗಿದೆ.

ಹೊರಟ್ಟಿಗೆ ಕೆಲವರ ಆಕ್ಷೇಪ
‘ಸಭಾಪತಿ ಸ್ಥಾನಕ್ಕೆ ಪರಿಷತ್ತಿನ ಬಿಜೆಪಿ ಸದಸ್ಯರಲ್ಲಿ ಬಹುತೇಕರು ಹೊರಟ್ಟಿ ಪರ ಒಲವು ವ್ಯಕ್ತಪಡಿಸಿದ್ದಾರೆ. ‘ಮುಂದೆ ಪಕ್ಷ ಅಧಿಕಾರಕ್ಕೆ ಬಾರದಿದ್ದರೆ ಹೊರಟ್ಟಿ ಪಕ್ಷದ ಪರ ಇರುತ್ತಾರೆ ಎನ್ನುವುದಕ್ಕೆ ಏನು ಖಚಿತವಿದೆ’ ಎಂದು ‌ಭಾರತಿ ಶೆಟ್ಟಿ ಪ್ರಶ್ನಿಸಿದರೆ, ಆಯನೂರು ಮಂಜುನಾಥ್‌, ವೈ.ಎ. ನಾರಾಯಣಸ್ವಾಮಿ ಮತ್ತು ಶಶಿಲ್‌ ನಮೋಶಿ ತಾವೂ ಆ ಸ್ಥಾನದ ಆಕಾಂಕ್ಷಿಗಳು ಎಂದಿದ್ದಾರೆ’ ಎಂದು ಮೂಲಗಳು ಹೇಳಿವೆ.

ಉಪಸಭಾಪತಿ ಸ್ಥಾನಕ್ಕೆಎಂ. ಕೆ.ಪ್ರಾಣೇಶ್‌ ಅವರನ್ನು ಆಯ್ಕೆಗೆ ಸಚಿವ ಆರ್‌.ಅಶೋಕ ಒತ್ತಡ ಹೇರಿದರೆ, ಕೆ.ಎಸ್‌.ಈಶ್ವರಪ್ಪ ಮತ್ತು ಕೆಲ ಕುರುಬ ನಾಯಕರು ರಘುನಾಥ ರಾವ್‌ ಮಲ್ಕಾಪುರೆ ಅವರಿಗೆ ನೀಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಚುನಾವಣೆಗೆ ಮುನ್ನ ಬಿಜೆಪಿ ಯವರು ಮಾತು ಕೊಟ್ಟಿದ್ದು ನಿಜ. ಮಾತು ಕೊಟ್ಟಂತೆ ನಡೆಯುವುದು, ಬಿಡುವುದು ಅವರಿಗೆ ಬಿಟ್ಟಿದ್ದು.
–ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT