ಮಂಗಳವಾರ, ಆಗಸ್ಟ್ 9, 2022
20 °C
ಪವರ್‌ ಬ್ಯಾಂಕ್, ಸನ್‌ ಫ್ಯಾಕ್ಟರಿ ಆ್ಯಪ್ ಸೃಷ್ಟಿ l ಸಿಐಡಿ ಕಾರ್ಯಾಚರಣೆ

₹ 290 ಕೋಟಿ ವಂಚನೆ: ಚೀನಾ ಪ್ರಜೆಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಸ್ ಅಹ್ಮದ್

ಬೆಂಗಳೂರು: ‘ಪವರ್ ಬ್ಯಾಂಕ್’ ಹಾಗೂ ‘ಸನ್‌ಫ್ಯಾಕ್ಟರಿ’ ಆ್ಯಪ್ ಮೂಲಕ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಸೈಬರ್ ಕ್ರೈಂ ಪೊಲೀಸರು, ಚೀನಾ ಪ್ರಜೆಗಳು ಸೇರಿ 11 ಮಂದಿಯನ್ನು ಬಂಧಿಸಿದ್ದಾರೆ.

‘ರಾಜ್ಯದ ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದ ಬಗ್ಗೆ 13 ಕಂಪನಿಗಳ ವಿರುದ್ಧ ‘ರೇಜೋರ್ ಪೇ’ ಕಂಪನಿ ಪ್ರತಿನಿಧಿಗಳು ದೂರು ನೀಡಿದ್ದರು. ಚೀನಾದ ಇಬ್ಬರು ಪ್ರಜೆಗಳು ಮತ್ತು ಇಬ್ಬರು ಟಿಬೆಟಿಯನ್ನರು,  ಸ್ಥಳೀಯ ಐವರು ನಿರ್ದೇಶಕರು ಸೇರಿ 11 ಜನರನ್ನು ಬಂಧಿಸಲಾಗಿದೆ’’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಮುಖ ಆರೋಪಿ ಅನಸ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ. ಈ ಗ್ಯಾಂಗ್, ಸುಮಾರು 2,000 ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ₹ 250 ಕೋಟಿಯಿಂದ ₹ 300 ಕೋಟಿ ವಂಚನೆ ಆಗಿರುವ ಮಾಹಿತಿ ಇತ್ತು. ಸದ್ಯ ₹ 290 ಕೋಟಿ ವಂಚನೆಗೆ ಸಂಬಂಧಿಸಿ ದಾಖಲೆಗಳು ಸಿಕ್ಕಿವೆ’ ಎಂದೂ ಹೇಳಿದರು.

ಚೀನಾ ಪ್ರಜೆಗಳ ನಿಯಂತ್ರಣ: ‘ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿದರೆ ದಿನ ಹಾಗೂ ವಾರದ ಲೆಕ್ಕದಲ್ಲಿ ಬಡ್ಡಿ ಸಮೇತ ದುಪ್ಪಟ್ಟು ಲಾಭದ ಆಮಿಷವೊಡ್ಡಲಾಗುತ್ತಿತ್ತು. ಈ ಆ್ಯಪ್‌ಗಳು ಚೀನಾ ಪ್ರಜೆಗಳ ನಿಯಂತ್ರಣದಲ್ಲಿದ್ದವು. ಜೊತೆಗೆ ಭಾರತೀಯ ಹಾಗೂ ಟಿಬೆಟ್ ಪ್ರಜೆಗಳನ್ನೇ ಮಧ್ಯವರ್ತಿಗಳಾಗಿ ಮಾಡಿಕೊಂಡು ದಂಧೆ ವಿಸ್ತರಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಚೀನಾದಲ್ಲಿ ವ್ಯಾಸಂಗ ಮಾಡಿ ಉದ್ಯೋಗ ವೀಸಾದಡಿ ನಗರಕ್ಕೆ ಬಂದಿದ್ದ ಯುವತಿಯರು, ಇಲ್ಲಿಯೇ ಕೆಲ ಯುವಕರನ್ನು ಮದುವೆಯಾಗಿದ್ದರು. ಅವರನ್ನೇ ಕಂಪನಿ ನಿರ್ದೇಶಕರನ್ನಾಗಿ ಮಾಡಿಕೊಂಡು ವಂಚನೆಗೆ ಇಳಿದಿದ್ದರು’ ಎಂದೂ ತಿಳಿಸಿವೆ.

ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆ: ‘ಕೇರಳದ ವ್ಯಾಪಾರಿ ಅನಸ್ ಅಹ್ಮದ್, ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆ ದಂಧೆಯ ಪ್ರಮುಖ ರೂವಾರಿ. ಚೀನಾದ ಹವಾಲಾ ಏಜೆಂಟರ ಜೊತೆ ಸಂಪರ್ಕವಿಟ್ಟುಕೊಂಡಿದ್ದಾನೆ. ಅಕ್ರಮ ಹಣ ವರ್ಗಾವಣೆಗಾಗಿ  ಬುಲ್‌ಫಿನ್ಚ್ ಸಾಫ್ಟ್‌ವೇರ್, ಎಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿಪ್ಪೊರ್ಡ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಕಂಪನಿ ತೆರೆದಿದ್ದ’ ಎಂದೂ ಮೂಲಗಳು ಹೇಳಿವೆ.

‘ಅನಸ್ ಪತ್ನಿ ಹು ಕ್ಸಿಯೋಲಿನ್ ಚೀನಾ ಪ್ರಜೆಯಾಗಿದ್ದು, ಆಕೆಯೂ ಕೃತ್ಯದಲ್ಲಿ ಭಾಗಿಯಾಗಿದ್ದಾಳೆ. ಆಕೆಗೂ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ.’

2,400 ಖಾತೆ ಜಪ್ತಿ: ‘ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಜನರಿಂದ ಸಂಗ್ರಹಿಸಿದ್ದ ಹಣವನ್ನು ಜಮೆ ಮಾಡುತ್ತಿದ್ದರು. ಅಂಥ ಸುಮಾರು 2,400 ಖಾತೆಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಕೇರಳದ ವಕೀಲನ ಸಹಾಯ

‘ಕಂಪನಿ ಸೃಷ್ಟಿಸಲು, ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳದ ವಕೀಲರೊಬ್ಬರು ಆರೋಪಿಗಳಿಗೆ ನೆರವಾಗಿದ್ದಾರೆ. ಆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅವರೂ ಚೀನಾ ಪ್ರಜೆಯನ್ನೇ ಮದುವೆಯಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವಂಚನೆಗೀಡಾಗಿದ್ದರೆ ಸಿಐಡಿ ಸಂಪರ್ಕಿಸಿ

‘ಪವರ್ ಬ್ಯಾಂಕ್ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ದಾಖಲೆಗಳ ಸಮೇತ ಸಿಐಡಿ ಸೈಬರ್ ಕ್ರೈಂ ವಿಭಾಗ ಸಂಪರ್ಕಿಸಬಹುದು’ ಎಂದು ಅಧಿಕಾರಿಯೊಬ್ಬರು ಕೋರಿದ್ದಾರೆ.

‘ಹೆಚ್ಚಿನ ಬಡ್ಡಿ, ಆಕರ್ಷಕ ಕೊಡುಗೆ ಹಾಗೂ ಇತ್ಯಾದಿ ಆಮಿಷಗಳಿಗೆ ಒಳಗಾಗಿ ಅಪರಿಚಿತ ಆ್ಯಪ್‌ಗಳನ್ನು ಹಣ ಹೂಡಿಕೆ ಮಾಡಬಾರದು. ಯಾವುದೇ ಆ್ಯಪ್ ಹಾಗೂ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು