ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯಾ ನೀತಿ ಪುನರ್‌ ರಚನೆ ಅಗತ್ಯ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಜನಸಂಖ್ಯಾ ದರದ ಧಾರ್ಮಿಕ ಅಸಮತೋಲನದಿಂದ ದೇಶದ ಅಸ್ಮಿತೆಗೆ ಧಕ್ಕೆ– ಆತಂಕ
Last Updated 15 ಅಕ್ಟೋಬರ್ 2021, 20:41 IST
ಅಕ್ಷರ ಗಾತ್ರ

ನಾಗಪುರ: ದೇಶದ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ಕಳವಳ ವ್ಯಕ್ತಪಡಿಸಿದ್ದಾರೆ. ಮುಂದಿನ 50 ವರ್ಷ ಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಿ, ಪುನರ್‌ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಗಡಿಗಳಲ್ಲಿ ನಡೆಯುತ್ತಿರುವ ಅಕ್ರಮ ಒಳನುಸುಳುವಿಕೆ ನಿಗ್ರಹಿಸುವುದು ಹಾಗೂ ಅಂಥವರನ್ನು ಗುರುತಿಸುವುದಕ್ಕಾಗಿ ರಾಷ್ಟ್ರೀಯ ಪೌರತ್ವನೋಂದಣಿಯ (ಎನ್‌ಆರ್‌ಸಿ) ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ವಿಜಯದಶಮಿ ಪ್ರಯುಕ್ತ, ರೇಶಿಮ್‌ಬಾಗ್‌ನಲ್ಲಿ ಸಂಘದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಶುಕ್ರವಾರ ಮಾತನಾಡಿದರು.

1951ರಿಂದ 2011ರವರೆಗೆ, ದೇಶದಲ್ಲಿ ಭಾರತೀಯ ಮೂಲದ ಧರ್ಮಗಳಿಗೆ ಸೇರಿದವರ ಜನಸಂಖ್ಯೆ ಶೇ 88 ಆಗಿತ್ತು. ಅದು ಈಗ ಶೇ 83.8ಕ್ಕೆ ಕುಸಿದಿದೆ. ಅದೇ ವೇಳೆಗೆ, ಶೇ 9.8 ರಷ್ಟು ಇದ್ದ ಮುಸ್ಲಿಮರ ಸಂಖ್ಯೆ ಶೇ 14.23ಕ್ಕೆ ಹೆಚ್ಚಿದೆ ಎಂದು ಹೇಳಿದರು.

ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರದಂಥ ಗಡಿ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದವರ ಜನಸಂಖ್ಯೆ ಅಭಿವೃದ್ಧಿ ದರವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು ಇದೆ. ಇದು, ಬಾಂಗ್ಲಾದೇಶದಿಂದ ನಿಲ್ಲದ ನುಸುಳುವಿಕೆಯನ್ನುಸ್ಪಷ್ಟವಾಗಿ ಸೂಚಿಸುತ್ತದೆ. ನಮ್ಮ ದೇಶದ ಜನಸಂಖ್ಯೆಯ ಶೇ 56ರಿಂದ ಶೇ 57ರಷ್ಟು ಜನರು ಯುವ ಸಮುದಾಯದವರೇ ಆಗಿದ್ದಾರೆ. 30 ವರ್ಷಗಳಲ್ಲಿ ಅವರಿಗೂ ವಯಸ್ಸಾಗುತ್ತದೆ. ಆಗ ಅವರನ್ನು ನೋಡಿಕೊಳ್ಳಲಿರುವ ಜನರು ಎಷ್ಟು... ಎಂಬೆಲ್ಲ ವಿಷಯಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಎಂದು ವಿವರಿಸಿದರು.

ಇದರೊಂದಿಗೆ, ನಮ್ಮ ಪರಿಸರ ಹಾಗೂ ಸಂಪನ್ಮೂಲವು ಈ ಪ್ರಮಾಣದ ಜನಸಂಖ್ಯೆಯನ್ನು ಸಂಬಾಳಿಸಲು ಸಮರ್ಥವೇ ಎಂಬ ಬಗ್ಗೆಯೂ ಯೋಚಿಸಬೇಕಿದೆ ಎಂದರು.

‘ಜನಸಂಖ್ಯೆಯು ಸಮಸ್ಯೆ ಆಗುವುದಾದರೆ, ಅದರ ಅಸಮ ತೋಲನವೂ ಸಮಸ್ಯೆಯೇ’ ಎಂದು ಅವರು ಹೇಳಿದರು.

ನುಸುಳುವಿಕೆ, ಮತಾಂತರಗಳಿಂದಾಗಿ, ವಿಶೇಷವಾಗಿ ಗಡಿ ಪ್ರದೇಶದಲ್ಲಿ ಜನಸಂಖ್ಯಾ ದರದಲ್ಲಿ ಧಾರ್ಮಿಕ ಅಸಮತೋಲನ ಕಂಡುಬಂದಿದೆ. ಇದರಿಂದ ದೇಶದ ಏಕತೆ, ಸೌಹಾರ್ದತೆಗೆ ಹಾಗೂ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಆರ್‌ಎಸ್‌ಎಸ್‌ ಕಾರ್ಯಕರ್ತರೂ ಸೇರಿದಂತೆ ದೇಶದ ಜನರು, ಇಂಥ ಜನಸಂಖ್ಯಾ ಅಸಮತೋಲನಕ್ಕೆ ‘ಕಾರಣಗಳು’ ಏನು ಎಂಬುದನ್ನು ತಿಳಿದುಕೊಂಡು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಇದನ್ನು ದೇಶಕ್ಕಾಗಿನ ಕರ್ತವ್ಯ ಎಂದು ತಿಳಿದು, ಇಂಥ ಜನಸಂಖ್ಯಾ ಅಸಮಾನತೆ ನಿವಾರಣೆಯಿಂದ ದೇಶವನ್ನು ರಕ್ಷಿಸಲು ಕಾನೂನುಬದ್ಧವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಭಯೋತ್ಪಾದನೆ ನಿಗ್ರಹ ತ್ವರಿತವಾಗಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು, ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ನಡೆಸುತ್ತಿದ್ದಾರೆ. ಹಿಂದೂಗಳ ಮನೋಸ್ಥೈರ್ಯವನ್ನು ಕಸಿದು ಮತ್ತೆ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಮರುಸ್ಥಾಪಿಸಲು ಹೊರಟಿದ್ದಾರೆ. ಹೀಗಾಗಿ, ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸಿ ಅವರನ್ನು ಸದೆಬಡಿಯುವ ಪ್ರಯತ್ನಗಳನ್ನು ಚುರುಕುಗೊಳಿಸಬೇಕು’ ಎಂದು ಭಾಗವತ್‌ ಹೇಳಿದ್ದಾರೆ.

‘ಸನಾತನ ಹಿಂದೂ ಸಂಸ್ಕೃತಿ ಹಾಗೂ ಉದಾರವಾದ ಹಿಂದೂ ಸಮಾಜಕ್ಕೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ ಇದೆ. ಮೂಲಭೂತವಾದ, ಅಸಹನೆ, ಭಯೋತ್ಪಾದನೆ, ಸಂಘರ್ಷ, ಹಗೆತನ ಹಾಗೂ ಶೋಷಣೆಯ ಆಪತ್ತಿನಿಂದ ಅದೊಂದೇ ಜಗತ್ತನ್ನು ರಕ್ಷಿಸಬಲ್ಲದು’ ಎಂದರು.

ಒಟಿಟಿ ವೇದಿಕೆಗಳಲ್ಲಿ ಅನಿಯಂತ್ರಿತ ವಿಷಯಗಳು ಪ್ರಸಾರವಾಗುತ್ತಿರುವುದಕ್ಕೆ, ಅನಿಯಂತ್ರಿತ ಬಿಟ್‌ಕಾಯಿನ್‌ ಕರೆನ್ಸಿ ಹಾಗೂ ಸಮಾಜ ಎಲ್ಲ ವರ್ಗದವರಲ್ಲೂ ಹೆಚ್ಚಿದ ಮಾದಕ ವಸ್ತು ಸೇವನೆ ಬಗ್ಗೆ ಕಳವಳ ವ್ಯಕ್ತ‍ಪಡಿಸಿದ ಅವರು, ಇವುಗಳನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT