ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ಪದಗ್ರಹಣ

ಇಡೀ ರಾಜ್ಯಕ್ಕೆ ಬಿಜೆಪಿಯವರು ವಿಷ ಹಾಕಿದ್ದಾರೆ– ಸಿದ್ದರಾಮಯ್ಯ ಕಿಡಿ
Last Updated 10 ಫೆಬ್ರುವರಿ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ‌ಗುರುವಾರ ಅಧಿಕಾರ ಸ್ವೀಕರಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಲಪಾಡ್‌ ಅವರಿಗೆ ಯುವ ಕಾಂಗ್ರೆಸ್‌ ಧ್ವಜ ನೀಡಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಚುನಾವಣೆಗೆ ವರ್ಷ ಇರುವಾಗಲೇ ಬಿಜೆಪಿಯವರು ಹಿಜಾಬ್ ವಿಚಾರ ಮುಂದಿಟ್ಟು ಮಕ್ಕಳ ಮನಸ್ಸಿನಲ್ಲಿ ದ್ವೇಷ ತುಂಬಿ, ಸಮಾಜ ಒಡೆಯಲು ಹೊರಟಿದ್ದಾರೆ. ಸಂಘ ಪರಿವಾರದವರು ಕೇವಲ ಉಡುಪಿ, ಮಂಗಳೂರು ಅಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ವಿಷ ಹಾಕಿದ್ದಾರೆ, ಬೆಂಕಿ ಹಚ್ಚಿದ್ದಾರೆ’ ಎಂದು ಕಿಡಿಕಾರಿದರು.

‘ಜನರ ಗಮನ ಬೇರೆಡೆಗೆ ಸೆಳೆಯಲು ಹಿಜಾಬ್ ಹಾಕುವುದನ್ನೇ ವಿವಾದವಾಗಿ ಮಾಡಿ ಮತ ಕ್ರೋಡೀಕರಣಕ್ಕೆ ಬಿಜೆಪಿಯವರು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾವು ಶಾಲೆ, ಕಾಲೇಜಿಗೆ ಹೋಗುವಾಗ ಕೇಸರಿ ಶಾಲು ಧರಿಸಿ ಬಂದಿದ್ದನ್ನು ನಾನೆಲ್ಲೂ ನೋಡಿರಲಿಲ್ಲ. ಆದರೆ, ಈಗ ಸಂಘ ಪರಿವಾರದವರು ತಾವೇ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿಕೊಂಡು ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು‘ ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಯಶಸ್ಸು ಸಾಧಿಸಬೇಕಾದರೆ ಧರ್ಮರಾಯನ ಧರ್ಮ ಇರಬೇಕು. ಕರ್ಣನ ದಾನತ್ವ, ಅರ್ಜುನನ ಗುರಿ, ವಿಧುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕಂತೆ. ಅದೇ ರೀತಿ ನೀವು ಯಶಸ್ಸು ಸಾಧಿಸಬೇಕಾದರೆ ಅನೇಕ ಗುಣಗಳನ್ನು ರೂಢಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು, ರಾಹುಲ್ ಗಾಂಧಿ ಅವರನ್ನು 2024ರಲ್ಲಿ ಪ್ರಧಾನಿಯಾಗಿ ಮಾಡುವುದು ಗುರಿಯಾಗಿರಬೇಕು’ ಎಂದು ಯುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮನವಿ ಮಾಡಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮಾತನಾಡಿ, ‘ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿದ್ದಾರೆ. ಎಲ್ಲಿಯವರೆಗೆ ಸೂರ್ಯ, ಚಂದ್ರ ಇರುತ್ತಾರೋ ಅಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಇರುತ್ತದೆ’ ಎಂದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನಲಪಾಡ್‌, ‘ಕಳೆದ ವರ್ಷ ಫಲಿತಾಂಶ ಬಂದರೂ ಇವತ್ತು ಅಧಿಕಾರ ಸ್ವೀಕಾರ ಮಾಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಛಲ ತೊಟ್ಟಿದ್ದೆ. ಯೂತ್ ಕಾಂಗ್ರೆಸ್‌ ಅನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕೆಂಬ ಕಾರ್ಯಸೂಚಿ ನನ್ನಲ್ಲಿದೆ’ ಎಂದರು.

‘ನನ್ನಿಂದ ಒಂದು ತಪ್ಪು ಆಗಿತ್ತು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೂ ಅಧಿಕಾರ ಸಿಗದಿದ್ದಾಗ ತಪ್ಪು ಅರಿವಾಯಿತು. ಆದರೆ, ನಿಮ್ಮ ಮನೆ ಮಗನಾಗಿ ತಪ್ಪು ಕ್ಷಮಿಸಬೇಕು’ ಎಂದು ಮನವಿ ಮಾಡಿದರು.

ಅಸಮಾಧಾನ ಬಹಿರಂಗ

ಮೊಹಮ್ಮದ್ ನಲಪಾಡ್ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಿದ್ದ ಯುವ ಕಾಂಗ್ರೆಸ್‌ ನಿಕಟಪೂರ್ವ ಅಧ್ಯಕ್ಷ ರಕ್ಷಾ ರಾಮಯ್ಯ ಗೈರಾಗಿದ್ದರು. ಈ ಮೂಲಕ, ಯುವ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮತ್ತೊಮ್ಮೆ ಬಹಿರಂಗಗೊಂಡಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿಚಾರದಲ್ಲಿ ನಲಪಾಡ್ ಹಾಗೂ ರಕ್ಷಾ ರಾಮಯ್ಯ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಲಪಾಡ್‌ ಅವರಿಗೆ ಹೆಚ್ಚಿನ ಮತ ಬಂದಿದ್ದರೂ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಚುನಾವಣೆಯಲ್ಲಿ ನಕಲಿ ಮತದಾನ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಮತ್ತೊಂದೆಡೆ ನಲಪಾಡ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದ ಕಾರಣ ಕಾಂಗ್ರೆಸ್ ಮುಖಂಡರು ರಕ್ಷಾ ರಾಮಯ್ಯಗೆ ಅಧಿಕಾರ ನೀಡಿದ್ದರು. ಆ ಬಳಿಕ ನಡೆದ ‘ಸಂಧಾನ’ ಸೂತ್ರದಂತೆ, ಇದೀಗ ನಲಪಾಡ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT