ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಮತಕ್ಕೆ ₹ 10 ಸಾವಿರದಿಂದ ₹ 50 ಸಾವಿರ: ಪರಿಷತ್ ಕಣದಲ್ಲಿ ಕಾಂಚಾಣದ ಸದ್ದು

ವಿಧಾನಪರಿಷತ್‌ ಚುನಾವಣೆ
Last Updated 7 ಡಿಸೆಂಬರ್ 2021, 19:33 IST
ಅಕ್ಷರ ಗಾತ್ರ

ಹುಬ್ಬಳ್ಳಿ:ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಚಾಣದ ಸದ್ದು ಜೋರಿದೆ.ಅಲ್ಲಲ್ಲಿ ಮತದಾರರನ್ನು ಸೆಳೆಯಲು ಉಡುಗೊರೆ, ಹಣ ಆಮಿಷವೊಡ್ಡುತ್ತಿರುವ ಪ್ರಕರಣಗಳು ಕೇಳಿಬರುತ್ತಿವೆ.ಬೆಳಗಾವಿ ಜಿಲ್ಲೆಯಲ್ಲಿಪ್ರತಿ ಮತಕ್ಕೆ ಸರಾಸರಿ ₹ 10 ಸಾವಿರದಿಂದ ₹ 50 ಸಾವಿರದವರೆಗೆ ಕೊಡುವ ಭರವಸೆ ನೀಡಲಾಗುತ್ತಿದೆ. ಸದ್ಯಕ್ಕೆ, ಮುಂಗಡವಾಗಿ ತಲಾ ₹ 10 ಸಾವಿರ ಕೊಡಲಾಗಿದೆ ಎನ್ನಲಾಗಿದೆ.ಮತದಾನ ದಿನ ಸಮೀಪಿಸುತ್ತಿದ್ದಂತೆಯೇ ‘ಮೌಲ್ಯ’ ಹೆಚ್ಚಾದರೂ ಅಚ್ಚರಿ ಇಲ್ಲ ಎನ್ನುವ ಮಾತುಗಳಿವೆ. ‘ಅವರು ₹ 25ಸಾವಿರ ಕೊಡುತ್ತಾರಂತೆ,
ನೀವೆಷ್ಟು ಕೊಡುತ್ತೀರಾ. ಪ್ರಥಮ ಪ್ರಾಶಸ್ತ್ಯಕ್ಕಾದರೆ ಇಷ್ಟು, ದ್ವಿತೀಯ ಪ್ರಾಶಸ್ತ್ಯದ ಮತಕ್ಕಾದರೆ ಇಷ್ಟು ಎಂದು ಕೆಲವರು ಬೇಡಿಕೆ ಇಡುತ್ತಿದ್ದಾರೆ’ ಎಂಬ ಮಾತುಗಳೂ ಕೇಳಿಬರುತ್ತಿವೆ.

ಅಲ್ಲಲ್ಲಿ ಡಾಬಾಗಳಲ್ಲಿ, ರೆಸಾರ್ಟ್‌ ಅಥವಾ ಹೋಟೆಲ್‌ಗಳಲ್ಲಿ ಮತದಾರರಿಗೆ ಪಾರ್ಟಿಗಳನ್ನು ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕೆಲವರು, ‘ಮತದಾರರನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿ’ ವಾಹನ ವ್ಯವಸ್ಥೆ ಮಾಡಿ, ಪ್ರವಾಸದ ಖರ್ಚನ್ನೂ ನೋಡಿಕೊಳ್ಳುವುದಾಗಿ ಆಮಿಷ ಒಡ್ಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಸ್ತ್ರಿಪೆಟ್ಟಿಗೆ, ಅಡುಗೆ ಒಲೆ ಹಂಚಲಾಗಿದೆ ಎಂಬ ಮಾಹಿತಿ ಇದೆ. ಪ್ರಮುಖ ಸದಸ್ಯರಿಗೆ ಚಿನ್ನದುಂಗರದ ಆಮಿಷವನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯಪುರ ಜಿಲ್ಲೆಯ ಕೆಲ ಅಭ್ಯರ್ಥಿಗಳು ದಸರಾ, ದೀಪಾವಳಿ ಸಂದರ್ಭದಲ್ಲಿಯೇ ಬೆಳ್ಳಿ ನಾಣ್ಯ, ಗಡಿಯಾರ ಹಂಚಿಕೆ ಮಾಡಿದ್ದರು. ಇದೀಗ ಒಂದೊಂದು ಮತಕ್ಕೆ ₹10 ಸಾವಿರದಿಂದ ₹25 ಸಾವಿರದ ವರೆಗೂ ಹಣ ಹಂಚುತ್ತಿರುವುದಾಗಿ ಹೇಳಲಾಗುತ್ತಿದೆ.

ಉತ್ತರ ಕನ್ನಡದಲ್ಲಿ ಈವರೆಗೆ ಹಣ ಹಂಚಿಲ್ಲ. ಆದರೆ, ಎಷ್ಟು ಹಂಚಬೇಕು ಎಂಬುದುಇಂದೋ–ನಾಳೆ ಸಂಜೆಯೊಳಗೆ ನಿರ್ಧಾರವಾಗಬಹುದು. ಬಿಜೆಪಿ ಎಷ್ಟು ಕೊಡುತ್ತದೆ ಎಂಬುದನ್ನು ನೋಡಿಕೊಂಡು ಕಾಂಗ್ರೆಸ್, ಕಾಂಗ್ರೆಸ್ ಎಷ್ಟುಕೊಡುತ್ತದೆ ಎಂಬುದನ್ನು ನೋಡಿಕೊಂಡು ಬಿಜೆಪಿ ಹಂಚಲು ಕಾಯುತ್ತಿವೆ. ಈಗಿನ ಮಾಹಿತಿಯಂತೆ ಮತಕ್ಕೆ ₹ 10 ಸಾವಿರದಿಂದ ₹ 15 ಸಾವಿರ ನಿಗದಿಯಾಗಿದೆ ಎಂದು ಗೊತ್ತಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಪಂಚಾಯಿತಿ ಸದಸ್ಯರಿಗೆ 10 ಗ್ರಾಂ ಬೆಳ್ಳಿ ನಾಣ್ಯ ಈಗಾಗಲೇ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಜೊತೆಗೆ ಅದರೊಂದಿಗೆ ಒಬ್ಬರಿಗೆ ತಲಾ ₹20,000 ನಗದು. ಬಿಜೆಪಿಯವರು ಒಬ್ಬರಿಗೆ ₹25,000 ನಗದು ಕೊಡಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಪಂಚಾಯ್ತಿ ಸದಸ್ಯರಿಗೆ ತಲಾ ₹ 15 ಸಾವಿರ ಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಈ ಮೂವರು ಪಂಚಾಯಿತಿ ಸದಸ್ಯರಿಗೆ ತಲಾ ₹10 ಸಾವಿರ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧಾರವಾಡ ಹಾಗೂ ಬಳ್ಳಾರಿಯಲ್ಲಿ ಇಂತಹ ಪ್ರಕರಣಗಳು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT