ಬುಧವಾರ, ಸೆಪ್ಟೆಂಬರ್ 22, 2021
24 °C
ಪ್ರಕರಣದ ಬಗ್ಗೆ ವರದಿ ಸಲ್ಲಿಸಲು ಹಾಸನ ಜಿಲ್ಲಾಧಿಕಾರಿಗೆ ಸೂಚನೆ

ಮಂಗಗಳ ಹತ್ಯೆ: ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ನಡೆದಿದ್ದ ಮಂಗಗಳ ಮಾರಣ ಹೋಮದ ಬಗ್ಗೆ ಹೈಕೋರ್ಟ್‌ ಶುಕ್ರವಾರ ಸ್ವಯಂ ಪ್ರೇರಿತ ಸಾರ್ವಜನಿಕ ಅರ್ಜಿ ದಾಖಲಿಸಿಕೊಂಡಿದೆ. ಮಂಗಗಳ ಹತ್ಯೆ ಬಗ್ಗೆ ಪತ್ರಿಕೆಗಳ ಪ್ರಕಟವಾಗಿದ್ದ ವರದಿ ನೋಡಿ ಕಳವಳಗೊಂಡಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

‘ಮಾಧ್ಯಮಗಳ ವರದಿ ಪ್ರಕಾರ, ಮಂಗಗಳನ್ನು ಹತ್ಯೆ ಮಾಡಿ ಚೀಲದಲ್ಲಿ ತುಂಬಿ ಬಿಸಾಡಲಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳ ಆಧಾರದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯವಿದೆ. ಈ ಘಟನೆಯು ಪ್ರಾಣಿಗಳ ಬದುಕುವ ಹಕ್ಕನ್ನು ಕಸಿದುಕೊಂಡಿದೆ’ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪ್ರಾಣಿ ಕಲ್ಯಾಣ ಮಂಡಳಿಯನ್ನು ಪ್ರತಿವಾದಿಗಳಾಗಿ ಸೇರಿಸಿಕೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠ ನಿರ್ದೇಶನ ನೀಡಿತು.

‘ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960ರ ಸೆಕ್ಷನ್ 3 ಮತ್ತು 11ರ ಸಂಪೂರ್ಣ ಉಲ್ಲಂಘನೆಯಾಗಿದೆ. ಮಂಗಗಳ ಹತ್ಯೆಗೆ ಕಾರಣರಾದ ಎಲ್ಲರ ವಿರುದ್ಧ ಕ್ರಮ ಜರುಗಬೇಕು. ಈ ರೀತಿಯ ಅಮಾನವೀಯ ಮತ್ತು ಆಘಾತಕಾರಿ ಘಟನೆಗಳು ಮುಂದೆ ನಡೆಯದಂತೆ ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯ ಇದೆ’ ಎಂದು ಪೀಠ ಹೇಳಿತು.

‘ಇಡೀ ಘಟನೆ ಮತ್ತು ಅದಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಹಾಸನ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸುವಂತೆ ಸರ್ಕಾರದ ಪರ ವಕೀಲರಿಗೆ ಪೀಠ ನಿರ್ದೇಶನ ನೀಡಿತು. ಆಗಸ್ಟ್ 4ರಂದು ವರದಿಯನ್ನು ಸರ್ಕಾರದ ವಕೀಲರು ಮಂಡಿಸಬೇಕು’ ಎಂದು ತಿಳಿಸಿತು.

ಬೇಲೂರು ತಾಲ್ಲೂಕಿನ ಚೌಡನಹಳ್ಳಿ ರಸ್ತೆ ಬದಿಯಲ್ಲಿ ಬುಧವಾರ ರಾತ್ರಿ ಬಿಸಾಡಿದ್ದ ಚೀಲದಲ್ಲಿ 38 ಮೃತಪಟ್ಟ ಮಂಗಗಳು, ಸಾವು–ಬದುಕಿನ ನಡುವೆ ಸೆಣೆಸುತ್ತಿದ್ದ 15 ಮಂಗಗಳು ದೊರೆತಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು