ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕರಾವಳಿಯಲ್ಲಿ ಬಿರುಸಿನ ಮಳೆ; ಮುಂಗಾರು ಚುರುಕು

Last Updated 21 ಜೂನ್ 2022, 12:35 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ. ತಿಂಗಳ ಆರಂಭದಲ್ಲೇ ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶವಾಗಿದ್ದರೂ ಮಳೆಯ ತೀವ್ರತೆ ಪಡೆದುಕೊಂಡಿರಲಿಲ್ಲ. ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಜೂನ್ 25ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನಗಳ ಕಾಲ 20.4 ಸೆಂ.ಮೀ.ವರೆಗೂ ಮಳೆಯಾಗುವ ಸಾಧ್ಯತೆಗಳಿದ್ದು, ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ನದಿ ಹಾಗೂ ಸಮುದ್ರದ ತೀರಗಳಲ್ಲಿ ವಾಸವಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಲೇ ಇತ್ತು. ಮಂಗಳವಾರ ಬೆಳಿಗ್ಗೆಯೂ ಹನಿ ಹನಿ ಮಳೆ ಮುಂದುವರಿಯಿತು. ಮಧ್ಯಾಹ್ನದ ವೇಳೆ ಮಳೆ ಆರ್ಭಟ ಜೋರಾಗಿತ್ತು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಸುಮಾರು ಎರಡು ತಾಸು ಎಡೆಬಿಡದೆ ಧಾರಾಕಾರ ಮಳೆ ಸುರಿಯಿತು.

ಮಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾಹನ ಸಂಚಾರಕ್ಕೂ ಕೆಲ ಕಾಲ ಅಡ್ಡಿ ಉಂಟಾಯಿತು. ತಗ್ಗು ಪ್ರದೇಶದಲ್ಲಿರುವ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಮೂಲ್ಕಿ ಬಳಿ ರಸ್ತೆಗೆ ಮರ ಉರುಳಿ ಬಿದ್ದಿದ್ದು, ಅದನ್ನು ತಕ್ಷಣವೇ ತೆರವುಗೊಳಿಸಲಾಯಿತು.

ಮಂಗಳವಾರ ಬೆಳಿಗ್ಗೆ 8.30ರವರೆಗೆ 24 ತಾಸುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ 40.4 ಮಿ.ಮೀ, ಬಂಟ್ವಾಳದಲ್ಲಿ 44.6 ಮಿ.ಮೀ, ಮಂಗಳೂರಿನಲ್ಲಿ, 52.8 ಮಿ.ಮೀ. ಪುತ್ತೂರಿನಲ್ಲಿ 24.7 ಮಿ.ಮೀ, ಸುಳ್ಯದಲ್ಲಿ 21.4 ಮಿ.ಮೀ, ಮೂಡುಬಿದಿರೆಯಲ್ಲಿ 52.1 ಮಿ.ಮೀ ಹಾಗೂ ಕಡಬ ತಾಲ್ಲೂಕಿನಲ್ಲಿ 47.9 ಮಿ.ಮೀ ಮಳೆಯಾಗಿದೆ.

ಉಡುಪಿ: ಬಿರುಸಿನ ಮಳೆ

ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಉಪ್ಪೂರಿನಲ್ಲಿ 10.1 ಸೆಂ.ಮೀ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT