ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ತಗ್ಗಿದರೂ ನಿಲ್ಲದ ಅವಾಂತರ: ಬೈಕ್‌ ಕೊಚ್ಚಿ ಹೋಗಿ ಸವಾರ ಸಾವು

ತುಂಬಿದ ಹಳ್ಳಕ್ಕೆ ಬಿದ್ದು ಬಾಲಕ
Last Updated 28 ಆಗಸ್ಟ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಮತ್ತು ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೆ, ಕಲ್ಯಾಣ ಕರ್ನಾಟಕದ ಕೆಲವೆಡೆ ಶನಿವಾರ ರಾತ್ರಿ ಜೋರು ಮಳೆಯಾಗಿದೆ. ಹಲವೆಡೆ ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಬಾಲಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದ ಕೆಗ್ಗೆರೆಯು‌ ಕೋಡಿ‌‌ ಬಿದ್ದಿದ್ದು, ಬೈಕ್‌ ಸವಾರ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.ಮಾವಿನಹಳ್ಳಿಯ ನಿವಾಸಿ ಅಂಕಣ್ಣ ಪುತ್ರ ಮಹೇಶ್ (40) ಮೃತರು.

ಹಾಸನ ಜಿಲ್ಲೆಯ ನುಗ್ಗೇಹಳ್ಳಿಯ ಹಿರೇಕೆರೆ ಕೆರೆ ಕೋಡಿ ಬಿದ್ದು, ಮನೆಗಳಿಗೂ ನೀರು ನುಗ್ಗಿದೆ. ಹೊಳೆನರಸೀಪುರ ತಾಲ್ಲೂಕಿನ ಬಿದರಕ್ಕ ಕೆರೆ ಕೋಡಿ ಒಡೆದು 100 ಹೆಕ್ಟೇರ್‌ ಬೆಳೆ ನಾಶವಾಗಿದೆ. ಕಲ್ಯಾಣ ಕರ್ನಾಟಕದ ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ಮಳೆಯಾಗಿದೆ. ಮೈದುಂಬಿ ಹರಿಯುತ್ತಿರುವ ಹಳ್ಳ ನೋಡಲು ಹೋಗಿದ್ದ ಬಾಲಕ ನಂದಕುಮಾರ ಬಡಿಗೇರ (13) ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ತಾಲ್ಲೂಕಿನ ಈಳಿಗನೂರ ಗ್ರಾಮದಲ್ಲಿ ಜರುಗಿದೆ.

ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ರೈತ ಮಲ್ಲಪ್ಪ ಎಂಬುವರು ಕಪ್ಪು ಬಣ್ಣಕ್ಕೆ ತಿರುಗಿದ ಹತ್ತಿಯನ್ನು ಕಿತ್ತು ಹಾಕಿದರು.

ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಮಳೆಯಾಗಿದ್ದು, 30 ಮನೆಗಳ ಗೋಡೆ ಕುಸಿದು ಬಿದ್ದಿದೆ. ಹಂಪಿಯ ಪುರಂದರದಾಸರ ಮಂಟಪ, ಸ್ನಾನಘಟ್ಟ, ಚಕ್ರತೀರ್ಥ ಮುಳುಗಿದೆ.ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೆಳ್ಳಿಗನೂರು ಗ್ರಾಮದ ಹಳ್ಳಕ್ಕೆ 13 ಕುರಿಗಳು ಕೊಚ್ಚಿ ಹೋಗಿವೆ. ತಾಲ್ಲೂಕಿನಾದ್ಯಂತ 37 ಮನೆಗಳು ಬಿದ್ದಿವೆ.

ರಾಮನಗರ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ, ಅರ್ಕಾವತಿ, ವೃಷಭಾವತಿ ಹಾಗೂ ಕಣ್ವ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ ಭರ್ತಿ ಆಗಿದ್ದು,ಅಬ್ಬೂರು ವ್ಯಾಸರಾಜ ಮಠಕ್ಕೆ ನದಿ ನೀರು ನುಗ್ಗಿದೆ. ಚನ್ನಪಟ್ಟಣ–ಮಾಕಳಿ–ಕುಣಿಗಲ್‌ ಮಾರ್ಗ ಬಂದ್‌ ಆಗಿದೆ. ಹರಿಸಂದ್ರ ಕೆರೆ ಕೋಡಿ ನುಗ್ಗಿದ ಪರಿಣಾಮ ತಗಚಗೆರೆ ಗ್ರಾಮದ ಮಧು ಅವರ ಕೋಳಿಫಾರಂನಲ್ಲಿದ್ದ 3ಸಾವಿರಕ್ಕೂ ಹೆಚ್ಚು ಕೋಳಿಸಾವನ್ನಪ್ಪಿವೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಚಂದ್ರಗಿರಿ-ಗುಟ್ಟೆ ಮಾರ್ಗದ ಸೇತುವೆ ದಾಟುವಾಗ ಟ್ರ್ಯಾಕ್ಟರ್‌ ಎಂಜಿನ್‌ ಪಲ್ಟಿಯಾಗಿದ್ದು, ಚಾಲಕ ಮತ್ತು ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT