ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಿಡುಗಡೆಯಾಗದ ₹4,218 ಕೋಟಿ– ವಿಶೇಷ ವರದಿ

ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನಡೆಯಾಗುವ ಆತಂಕ
Last Updated 2 ಅಕ್ಟೋಬರ್ 2022, 21:40 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಪುರಸ್ಕೃತ ಯೋಜನೆಯಡಿ ಕೇಂದ್ರ ಸರ್ಕಾರದ ಪಾಲಿನ ಮೊದಲ ಕಂತಿನ ₹4,218 ಕೋಟಿ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದಾಗಿ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನಡೆಯಾಗುವ ಆತಂಕ ಉಂಟಾಗಿದೆ.

ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಈ ಸಾಲಿನ ಅನುದಾನ ಒಟ್ಟು ₹47,714 ಕೋಟಿ. ಇದರಲ್ಲಿ ಪ್ರಾಥಮಿಕ ಶಿಕ್ಷಣ ಯೋಜನೆಯ ₹9,098 ಕೋಟಿ ಸಹ ಸೇರಿದೆ. ಇದರಲ್ಲಿ ಕೇಂದ್ರದ ಪಾಲು ₹20,359 ಕೋಟಿಗಳಾಗಿದ್ದು, ಇಲ್ಲಿಯವರೆಗೆ ₹5,960 ಕೋಟಿ (ಶೇ 29) ಮಾತ್ರ ಬಿಡುಗಡೆಯಾಗಿದೆ.

2020–21ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ ಕೇಂದ್ರ ಪಾಲಿನ ₹18,802 ಕೋಟಿ ಅನುದಾನದಲ್ಲಿ ₹8,422 (ಶೇ 44) ಬಿಡುಗಡೆಯಾಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಸಲ ಬಿಡುಗಡೆಯಾದ ಅನುದಾನ ಕಡಿಮೆ. ಕೇಂದ್ರದ ಶೇ 100ರಷ್ಟು ಅನುದಾನ ಬಿಡುಗಡೆ ಮಾಡಿಸಿಕೊಳ್ಳಲು ಕೇಂದ್ರದ ಸಚಿವಾಲಯಗಳಿಗೆ ಬಳಕೆ ಪ್ರಮಾಣಪತ್ರ ಸಲ್ಲಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ಅನುದಾನ ಬಿಡುಗಡೆಗೆ ಕೇಂದ್ರ ಸಚಿವಾಲಯಗಳಿಗೆ ಪತ್ರ ಬರೆದು ಒತ್ತಡ ಹೇರುವ ಬಗ್ಗೆ ಚರ್ಚಿಸಲಾಯಿತು.

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಸ್ವಚ್ಛ ಭಾರತ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಮಗ್ರ ಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ಪಿಎಂ ಆವಾಸ್‌ ಯೋಜನೆ (ನಗರ), ಕೃಷಿ ವಿಕಾಸ ಯೋಜನೆ, ಆಹಾರ ಭದ್ರತಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಂಚಯಿ ಸೇರಿವೆ.

ರಾಷ್ಟ್ರೀಯ ಆರೋಗ್ಯ ಅಭಿ ಯಾನ ದಡಿ ಹಿಂದಿನ ವರ್ಷ ಬಿಡುಗಡೆ ಯಾದ ಕೇಂದ್ರ, ರಾಜ್ಯದ ಅನುದಾನದಲ್ಲಿ ₹684 ಕೋಟಿ ಬಳಕೆ ಮಾಡಿರಲಿಲ್ಲ. ಅದರಲ್ಲಿ ಈ ವರ್ಷ ₹509 ಕೋಟಿ ಖರ್ಚು ಮಾಡಲಾಗಿದೆ. ಈ ವರ್ಷ ₹470 ಕೋಟಿ ಬಿಡುಗಡೆಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಕೇಂದ್ರಕ್ಕೆ ಪ್ರಸ್ತಾವನೆ: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಮಧ್ಯಾಹ್ನ ಬಿಸಿಯೂಟ ಯೋಜನೆಗಳಿಗೆ ಕೇಂದ್ರ ದಿಂದ ಅನುದಾನ ಬಿಡುಗಡೆಯಾಗದೆ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಕ್ಕೆ ಕರ್ನಾಟಕ ಈ ಸಂಬಂಧ ಮಾಹಿತಿ ನೀಡಿದೆ. ಶೀಘ್ರ ಶೇ 70ರಷ್ಟು ಅನುದಾನ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.

ಬಳಕೆಯಾಗದ ಅನುದಾನ

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ಕಳೆದ ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ₹3,338 ಕೋಟಿ ಉಳಿಯಾಗಿತ್ತು. ಅದರಲ್ಲಿ ಈ ವರ್ಷ ₹1,301 ಕೋಟಿ ವೆಚ್ಚ ಮಾಡಲಾಗಿದೆ. ಈ ವರ್ಷ ಈ ಯೋಜನೆಗೆ ಇನ್ನೂ ಹೆಚ್ಚು ವೆಚ್ಚ ಮಾಡಲು ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜಿಸಿದೆ.

ಸ್ವಚ್ಛ ಭಾರತ (ಗ್ರಾಮೀಣ) ಯೋಜನೆಯಡಿ ಕಳೆದ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ₹328 ಕೋಟಿ ಹಾಗೆಯೇ ಉಳಿದಿತ್ತು. ಅದರಲ್ಲಿ ಈ ವರ್ಷ ₹53 ಕೋಟಿಯನ್ನಷ್ಟೇ ಕರ್ನಾಟಕ ಸರ್ಕಾರ ವೆಚ್ಚ ಮಾಡಿದೆ.

ಕೃಷಿ ಸಿಂಚಾಯಿಗಿಲ್ಲ ಉತ್ಸಾಹ

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಈ ವರ್ಷ ₹511 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಅದರಲ್ಲಿ ಕರ್ನಾಟಕ ಸರ್ಕಾರ ವೆಚ್ಚ ಮಾಡಿದ್ದು ₹89 ಕೋಟಿಯಷ್ಟೇ. ಉಳಿದ ಅನುದಾನವನ್ನು ಅಕ್ಟೋಬರ್ ಅಂತ್ಯದೊಳಗೆ ವೆಚ್ಚ ಮಾಡಲು ಗಡುವು ನಿಗದಿಪಡಿಸಲಾಗಿದೆ. ಈ ಅನುದಾನ ಖರ್ಚು ಆಗದ ಕಾರಣ ಕೇಂದ್ರ ಸರ್ಕಾರದ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT