ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ವಿದ್ಯುತ್‌ ಉತ್ಪಾದನೆ: ಮಂಗಳೂರಿನಲ್ಲಿ ₹ 52,000 ಕೋಟಿ ಹೂಡಿಕೆಗೆ ಒಪ್ಪಂದ

ಹಸಿರು ಹೈಡ್ರೋಜನ್‌- ಅಮೋನಿಯಾ, ಸೌರ ವಿದ್ಯುತ್‌ ಘಟಕ ಸ್ಥಾಪಿಸಲಿರುವ ಆಕ್ಮೆ ಕ್ಲೀನ್‌ಟೆಕ್‌
Last Updated 6 ಜೂನ್ 2022, 16:07 IST
ಅಕ್ಷರ ಗಾತ್ರ

ಬೆಂಗಳೂರು: ಹರಿಯಾಣದ ಆಕ್ಮೆ ಕ್ಲೀನ್‌ಟೆಕ್‌ ಸಲ್ಯೂಷನ್ಸ್‌ ಕಂಪನಿ ಮಂಗಳೂರಿನಲ್ಲಿ ₹ 52,000 ಕೋಟಿ ವೆಚ್ಚದಲ್ಲಿ ಹಸಿರು ಹೈಡ್ರೋಜನ್‌– ಅಮೋನಿಯಾ ತಯಾರಿಕಾ ಘಟಕ ಹಾಗೂ ಪೂರಕವಾಗಿ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ.

ಆಕ್ಮೆ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್‌ ಕಶ್ಯಪ್‌ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಈ ಸಂಬಂಧ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದರು. ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

ಈ ಯೋಜನೆಯ ಅಡಿಯಲ್ಲಿ 1,800 ಉದ್ಯೋಗಗಳ ಸೃಜನೆಯಾಗಲಿದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಪರವಾನಗಿ ವಿತರಣೆ, ನೋಂದಣಿ ಪ್ರಕ್ರಿಯೆ, ಅನುಮೋದನೆ, ನಿರಾಕ್ಷೇಪಣಾ ಪತ್ರ, ಪ್ರೋತ್ಸಾಹಧನವನ್ನು ಸಕಾಲದಲ್ಲಿ ಒದಗಿಸುವುದಾಗಿ ರಾಜ್ಯ ಸರ್ಕಾರ ಒಪ್ಪಂದದಲ್ಲಿ ತಿಳಿಸಿದೆ. ಐದು ವರ್ಷಗಳೊಳಗೆ ಘಟಕವನ್ನು ಆರಂಭಿಸುವುದಾಗಿ ಆಕ್ಮೆ ಸಮೂಹ ವಾಗ್ದಾನ ನೀಡಿದೆ.

ಒಪ್ಪಂದದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಹಸಿರು ಹೈಡ್ರೋಜನ್‌ ನೀತಿಯನ್ನು ಶೀಘ್ರದಲ್ಲಿ ಜಾರಿಗೆ ತರಲಿದೆ. ಆಕ್ಮೆ ಸಮೂಹವು ಅದರ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದರು.

ಆಕ್ಮೆ ಸಮೂಹವು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೈಡ್ರೋಜನ್ –ಅಮೋನಿಯಾ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ವಿಶ್ವದ ಮೊದಲ ಹೈಡ್ರೋಜನ್ ಅಮೋನಿಯಾ, ಸೋಲಾರ್ ಘಟಕವನ್ನು ಸ್ಥಾಪಿಸಿದೆ. ಈಗ ಕರ್ನಾಟಕದಲ್ಲೂ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಆಕ್ಮೆ ಸಮೂಹದ ಉಪಾಧ್ಯಕ್ಷ ಶಶಿ ಶೇಖರ್ ತಿಳಿಸಿದರು.

ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಆಕ್ಮೆ ಸಮೂಹ ಅಧಿಕಾರಿಗಳಾದ ಎಂ.ವಿ.ವಿ.ಎಸ್ ರೆಡ್ಡಿ, ಅರುಣ್ ಚೋಪ್ರಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT