ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ತೇಜಸ್' ಲಘು ಯುದ್ಧ ವಿಮಾನದಲ್ಲಿ ಹಾರಾಡಿದ ತೇಜಸ್ವಿ ಸೂರ್ಯ

Last Updated 4 ಫೆಬ್ರುವರಿ 2021, 11:48 IST
ಅಕ್ಷರ ಗಾತ್ರ

ಬೆಂಗಳೂರು: 'ಏರೊ ಇಂಡಿಯಾ 2021' ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಗುರುವಾರ ತೇಜಸ್ ಲಘು ಯುದ್ಧ ವಿಮಾನದಲ್ಲಿ ಪಯಣಿಸಿದರು. ಬೆಂಗಳೂರಿನ ಎಚ್ಎಎಲ್ ಜೊತೆ ₹48,000 ಕೋಟಿ ಮೊತ್ತದ ಖರೀದಿ ಒಪ್ಪಂದ ಮಾಡಿಕೊಂಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಈ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದೇನೆ ಎಂದು ಸೂರ್ಯ ತಿಳಿಸಿದರು.

30 ನಿಮಿಷಗಳ ಬಾನಿನಲ್ಲಿ ಸುತ್ತಾಡಿದ ಬಳಿಕ ಅನುಭವ ಹಂಚಿಕೊಂಡ ಅವರು, 'ಯುದ್ಧವಿಮಾನದಲ್ಲಿ ಮೊದಲ‌ ಹಾರಾಟ ನಡೆಸಿದ ಅನುಭವ ರೋಮಾಂಚನಕಾರಿಯಾಗಿತ್ತು' ಎಂದರು.

‘ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದೆ. ಅದರ ಭಾಗವಾಗಿ 83 ವಿಮಾನಗಳನ್ನು ಎಚ್ಎಎಲ್‌ನಿಂದ ಖರೀದಿಸುತ್ತಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ವಿದೇಶಿ ಅವಲಂಬನೆಯನ್ನು ತಪ್ಪಿಸಲು ಹಾಗೂ ಸ್ವದೇಶಿ ತಂತ್ರಜ್ಞರನ್ನು ಹುರಿದುಂಬಿಸಲು ಇದರಿಂದ ಸಾಧ್ಯವಾಗಲಿದೆ' ಎಂದರು.

'ತೇಜಸ್' ಉತ್ಪಾದನೆಯಿಂದ ಬೆಂಗಳೂರು ನಗರದಲ್ಲಿ ಔದ್ಯೋಗಿಕ ಅವಕಾಶಗಳು ಹೆಚ್ಚಲಿದ್ದು, ತೇಜಸ್ ಅನ್ನು ಜಾಗತಿಕ ಮಟ್ಟದ ಬ್ರಾಂಡ್ ಆಗಿ ಪರಿವರ್ತನೆಗೊಳಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ" ಎಂದು ತಿಳಿಸಿದರು.

ತೇಜಸ್‌ನ ಮಾರ್ಕ್ 1 ಎ ಆವೃತ್ತಿಯ 73 ಮತ್ತು 10 ತರಬೇತಿ ವಿಮಾನಗಳ ಖರೀದಿ ಕುರಿತ ಕರಾರು ಪತ್ರ ವನ್ನು ಎಚ್‌ಎಎಲ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಆರ್. ಮಾಧವನ್ ಅವರಿಗೆ ರಕ್ಷಣಾ ಇಲಾಖೆ, ಖರೀದಿ ವಿಭಾಗದ ಮಹಾನಿರ್ದೇಶಕ ವಿ.ಎಲ್ ಕಾಂತರಾವ್ ಅವರು ಬುಧವಾರ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಹಸ್ತಾಂತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

'ತೇಜಸ್' ಲಘು ಯುದ್ಧ ವಿಮಾನದ ಸೇರ್ಪಡೆ ಮೂಲಕ ಭಾರತದ ರಕ್ಷಣಾ ಕ್ಷೇತ್ರದಲ್ಲಿ 'ಆತ್ಮ ನಿರ್ಭರತೆ' ಸಾಧಿಸಲಾಗುತ್ತಿದೆ. ಈ ಯುದ್ಧವಿಮಾನಗಳನ್ನು ಇತರ ದೇಶಗಳಿಗೆ ರಪ್ತು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ. ಪ್ರಪಂಚದ ಕೆಲವೇ ನಗರಗಳು ಜಾಗತಿಕ ಮಟ್ಟದ ಯುದ್ಧವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು 'ತೇಜಸ್' ಲಘು ಯುದ್ಧ ವಿಮಾನದ ಉತ್ಪಾದನೆ, ನಮ್ಮ ಬೆಂಗಳೂರಿನ ಹೆಮ್ಮೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ’ ಎಂದು ಸಂಸದ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT