ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರಗಳಲ್ಲೂ ಎಂಎಸ್‌ಐಎಲ್‌ ಚಿಟ್ಸ್‌ ಶಾಖೆ: ಹಾಲಪ್ಪ ಹರತಾಳು

Last Updated 3 ಜುಲೈ 2022, 2:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಚಿಟ್‌ಫಂಡ್‌ ವಹಿವಾಟನ್ನು ವಿಸ್ತರಿಸಲು ನಿರ್ಧರಿಸಿದ್ದು, ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಶಾಖೆ ಆರಂಭಿಸಲಾಗುವುದು ಎಂದು ಎಂಎಸ್‌ಐಎಲ್‌ ಅಧ್ಯಕ್ಷ ಎಚ್‌. ಹಾಲಪ್ಪ ಹರತಾಳು ತಿಳಿಸಿದರು.

ಸಂಸ್ಥೆಯು 56 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ರಾಜ್ಯದಲ್ಲಿ ಎಂಎಸ್‌ಐಎಲ್‌ ಚಿಟ್‌ಫಂಡ್‌ನ 26 ಶಾಖೆಗಳಿವೆ. 2 ಲಕ್ಷ ಗ್ರಾಹಕರು ಈವರೆಗೆ ಅನುಕೂಲ ಪಡೆದಿದ್ದಾರೆ. 2021–22ರಲ್ಲಿ ಚಿಟ್‌ಫಂಡ್‌ ವಿಭಾಗದಲ್ಲಿ ₹ 308 ಕೋಟಿ ವಹಿವಾಟು ನಡೆಸಲಾಗಿದೆ. ಎಂಎಸ್‌ಐಎಲ್‌ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಗ್ರಾಹಕರು ಚಿಟ್‌ ಫಂಡ್‌ ವ್ಯವಹಾರದಲ್ಲಿ ಮೋಸ ಹೋಗುವ ಅಪಾಯ ಇಲ್ಲ. ಜನರಿಗೆ ಸುರಕ್ಷಿತವಾದ ಚಿಟ್‌ಫಂಡ್‌ ಹೂಡಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಎಲ್ಲ ತಾಲ್ಲೂಕುಗಳಲ್ಲೂ ಶಾಖೆ ತೆರೆಯಲಾಗುವುದು’ ಎಂದರು.

ಮದ್ಯ ಮಾರಾಟ ಮಳಿಗೆ ಮೇಲ್ದರ್ಜೆಗೆ: ಎಂಎಸ್‌ಐಎಲ್‌ ರಾಜ್ಯದಾದ್ಯಂತ 979 ಮದ್ಯ ಮಾರಾಟ ಮಳಿಗೆಗಳನ್ನು ಹೊಂದಿದೆ. ಗರಿಷ್ಠ ಮಾರಾಟ (ಎಂಆರ್‌ಪಿ) ದರದಲ್ಲಿ ಗ್ರಾಹಕರಿಗೆ ಮದ್ಯ ಒದಗಿಸುತ್ತಿದ್ದು, 2021–22ರಲ್ಲಿ ₹ 2,399 ಕೋಟಿ ವಹಿವಾಟು ನಡೆಸಲಾಗಿದೆ. 2022–23ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯ 200 ಮದ್ಯ ಮಾರಾಟ ಮಳಿಗೆಗಳನ್ನು ಹೊಸ ವಿನ್ಯಾಸದೊಂದಿಗೆ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನೋಟ್‌ ಪುಸ್ತಕ ಮತ್ತು ಸ್ಟೇಷನರಿ ಮಾರಾಟ, ಸೋಲಾರ್‌ ವಾಟರ್‌ ಹೀಟರ್‌ ಮಾರಾಟ, ಜನರಿಕ್‌ ಔಷಧಿ ಮಾರಾಟ, ಪ್ರವಾಸ ಮತ್ತು ಪ್ರಯಾಣ ಸೌಲಭ್ಯ ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ವಿಸ್ತರಿಸಲಾಗುವುದು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 3,350 ಕೋಟಿ ವಹಿವಾಟು ನಡೆಸಿ, ₹ 110 ಕೋಟಿ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT