ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3,878 ಕೋಟಿ ಕಬ್ಬು ಬಿಲ್‌ ಬಾಕಿ: ಸಕ್ಕರೆ ಸಚಿವ ಎಂಟಿಬಿ ನಾಗರಾಜ್

Last Updated 5 ಫೆಬ್ರುವರಿ 2021, 12:49 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 2015 ರಿಂದ 2021 ರ ಜನವರಿವರೆಗೆ ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತ ₹3,878 ಕೋಟಿ ಎಂದು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅವಧಿಯಲ್ಲಿ ಒಟ್ಟು ₹77,890 ಕೋಟಿ ಪಾವತಿಸಬೇಕಾಗಿತ್ತು, ಈಗಾಗಲೇ ₹76,518 ಕೋಟಿ ರೈತರಿಗೆ ಪಾವತಿ ಮಾಡಲಾಗಿದೆ ಎಂದು ಹೇಳಿದರು.

2018–19 ನೇ ಹಂಗಾಮಿಗೆ ₹ 11,948 ಕೋಟಿ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾಗಿತ್ತು. ಈ ಪೈಕಿ ₹12,083 ಕೋಟಿಗಳನ್ನು ಪಾವತಿಸಲಾಗಿದೆ. ₹8.93 ಕೋಟಿ ಬಾಕಿ ಇದೆ. ಕೆಲವು ಕಾರ್ಖಾನೆಗಳು ನ್ಯಾಯ ಮತ್ತು ಲಾಭದಾಯಕ ಬೆಲೆಗಿಂತ ಹಚ್ಚಾಗಿ ಕಬ್ಬು ಬಿಲ್ಲನ್ನು ಪಾವತಿಸಿವೆ ಎಂದರು.

2019–20 ನೇ ಹಂಗಾಮಿನಲ್ಲಿ ₹10,428.96 ಕೋಟಿಗಳನ್ನು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಿದ್ದು, ಈ ಪೈಕಿ ₹10,628.73 ಪಾವತಿಸಲಾಗಿದೆ. ₹49.01 ಕೋಟಿ ಪಾವತಿಸಲು ಬಾಕಿ ಇದೆ ಎಂದು ನಾಗರಾಜ್‌ ಹೇಳಿದರು.

ಉಳಿದಿರುವ ಮೊತ್ತದ ಪಾವತಿಗೆ ಕ್ರಮ ಜರುಗಿಸಲಾಗಿದೆ. ಕಬ್ಬು ಸರಬರಾಜು ಮಾಡಿದ 14 ದಿನಗಳ ಒಳಗೆ ಬಿಲ್‌ ಪಾವತಿ ಮಾಡಬೇಕು. ಒಂದು ವೇಳೆ ಬಿಲ್‌ ಬಾಕಿ ಉಳಿಸಿಕೊಂಡರೆ, ಕಾರ್ಖಾನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಬ್ಬು ಅರೆಯುವ ಋತು ಆರಂಭವಾದ ಬಳಿಕ ಬಾಕಿ ಪಾವತಿ ಮಾಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಲಕ್ಷ್ಮಿ ಮುಂದುವರಿಕೆ ಇಲ್ಲ

ಎಚ್‌.ಡಿ.ಕುಮಾಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಒಂದು ವರ್ಷದ ಅವಧಿಗೆಂದು ಜಾರಿ ಮಾಡಿದ್ದ ಗೃಹ ಲಕ್ಷ್ಮಿ ಯೋಜನೆಯನ್ನು ಮುಂದುವರಿಸದಿರಲು ಸರ್ಕಾರ ತೀರ್ಮಾನಿಸಿದೆ.

ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆಭರಣಗಳ ಮೇಲೆ ಶೇ 3 ರಷ್ಟು ಬಡ್ಡಿದರದಲ್ಲಿ ಬೆಳೆ ಸಾಲ ನೀಡಲಾಗುತ್ತದೆ. ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಈ ಯೋಜನೆಯನ್ನು ಕೈಬಿಟ್ಟಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಈ ಯೋಜನೆ ಒಂದು ವರ್ಷಕ್ಕೆ ಸೀಮಿತವಾಗಿತ್ತು. ಅಲ್ಲದೆ ಈ ಯೋಜನೆಯಡಿ ರಾಜ್ಯದಲ್ಲಿ ಸಾಲ ಪಡೆದವರ ಸಂಖ್ಯೆ 1015. ಎಲ್ಲೂ ಈ ಯೋಜನೆಗೆ ಬೇಡಿಕೆ ಇಲ್ಲ. 2–3 ಡಿಸಿಸಿ ಬ್ಯಾಂಕ್‌ಗಳನ್ನು ಬಿಟ್ಟರೆ ಬೇರೆ ಎಲ್ಲೂ ಕೇಳುತ್ತಿಲ್ಲ. ಆದ ಕಾರಣ ಈ ಯೋಜನೆ ಕೈಬಿಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT