ಸೋಮವಾರ, ಜೂನ್ 21, 2021
27 °C

ಬಾಕಿ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ: ಸಚಿವ ಎಂಟಿಬಿ ನಾಗರಾಜ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ಕೂಡಲೇ ರೈತರಿಗೆ ಕಬ್ಬಿನ ಬಿಲ್ ಬಾಕಿ ಪಾವತಿ ಮಾಡದಿದ್ದರೆ, ಕಬ್ಬು(ನಿಯಂತ್ರಣ) ಕಾಯ್ದೆಯಡಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್‌ ಎರಡನೇ ಅಲೆಯಿಂದ ಕಬ್ಬು ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಬಿಲ್‌ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

2020–21 ನೇ ಸಾಲಿನಲ್ಲಿ ಕಬ್ಬು ಅರೆಯುವ ಹಂಗಾಮಿನಲ್ಲಿ 64 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾರ್ಖಾನೆಗಳು ಏಪ್ರಿಲ್‌ 30 ರ ವೇಳೆಗೆ 440.84 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಅರೆದು 42.94 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದಿಸಿವೆ. ಈ ಅವಧಿಯಲ್ಲಿ ₹13,348.10 ಕೋಟಿ ಬಿಲ್‌ ಪೈಕಿ ₹12,068.17 ಕೋಟಿ ಪಾವತಿ ಮಾಡಿದ್ದು, ₹1,324.49 ಕೋಟಿ ಬಾಕಿ ಇದೆ ಎಂದು ಅವರು ಹೇಳಿದರು.

ಪಾವತಿ ಪ್ರಮಾಣ ಶೇ 90 ರಷ್ಟು ಆಗಿದ್ದು, ಬಾಕಿ ಪ್ರಮಾಣ ಶೇ 10 ಇದೆ. ಪ್ರಸ್ತುತ ಕಬ್ಬು ಅರೆಯುವ ಹಂಗಾಮು ಜೂನ್ ತಿಂಗಳವರೆಗೆ ಚಾಲನೆಯಲ್ಲಿ ಇರುತ್ತದೆ ಎಂದು ನಾಗರಾಜ್‌ ತಿಳಿಸಿದರು.

ಕಬ್ಬಿನ ಬಿಲ್‌ ಪಾವತಿ ಮಾಡದಿರುವ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಬಿಲ್‌ ವಸೂಲಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮತ್ತು ಕಾರ್ಖಾನೆಗಳು ಬಾಕಿ ಪಾವತಿಸದೇ ಇದ್ದಲ್ಲಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಕ್ಕರೆ ಕಾರ್ಖಾನೆಗಳ ಹಳೆಯ ಬಾಕಿ ₹28.38 ಕೋಟಿಗಳಷ್ಟಿದೆ. ಇದರಲ್ಲಿ 2015–16 ನೇ ಸಾಲಿನ ₹11.37 ಕೋಟಿ, 2018–19 ನೇ ಸಾಲಿನ ₹11.20 ಕೋಟಿ ಮತ್ತು 2019–20 ನೇ ಸಾಲಿನ ₹5.80 ಕೋಟಿ ಸೇರಿದೆ. ಬಾಕಿ ಉಳಿಸಿಕೊಂಡಿರುವ ಈ ಕಾರ್ಖಾನೆಗಳು ನಿಷ್ಕ್ರಿಯವಾಗಿವೆ. ಆದ್ದರಿಂದ ಈ ಕಾರ್ಖಾನೆಗಳಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ವಸೂಲಾತಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ಆ ಪ್ರಕಾರ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು