ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ಬ್ಲ್ಯಾಕ್‌ಮೇಲ್ ರಾಜಕಾರಣಿ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ
Last Updated 30 ಅಕ್ಟೋಬರ್ 2020, 18:55 IST
ಅಕ್ಷರ ಗಾತ್ರ

ಬೆಂಗಳೂರು: ‘ಮುನಿರತ್ನ ಬ್ಲ್ಯಾಕ್‌ಮೇಲ್ ರಾಜಕಾರಣಿ. ಕ್ಷೇತ್ರದಲ್ಲಿ ತಮಗಾಗಿ ದುಡಿಯುವ ಕಾರ್ಯಕರ್ತರ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿ, ಬ್ಲಾಕ್‌ಮೇಲ್‌ ಮಾಡುವುದು ಅವರಿಗೆ ಅಭ್ಯಾಸ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಾಲಹಳ್ಳಿ, ಪೀಣ್ಯ ಮತ್ತಿತರ ವಾರ್ಡ್‌ಗಳಲ್ಲಿ ಶುಕ್ರವಾರ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌. ಪರ ಮತಯಾಚಿಸಿ ಮಾತನಾಡಿದ ಅವರು, ‘ಮುನಿರತ್ನ ಕಾಂಗ್ರೆಸ್‌ನಲ್ಲಿದ್ದ ಅವಧಿಯಲ್ಲಿ ಮುನಿರತ್ನ ಅವರ ಪರ ಕೆಲಸ ಮಾಡಿದ್ದ ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಸಾವಿರಾರು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ’ ಎಂದು ದೂರಿದರು.

ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಎಂದು ಮುನಿರತ್ನ ಭಾವಿಸಿದ್ದರೆ ಅವರಂತಹ ಮೂರ್ಖ ಬೇರೊಬ್ಬರಿಲ್ಲ. ಪೊಲೀಸರು ಜಾಗ್ರತೆಯಿಂದ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರ ಇದೆ ಎಂದು ಮುನಿರತ್ನ ಪರವಾಗಿ ಕೆಲಸ ಮಾಡಿದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಮುನಿರತ್ನ ಎರಡು ಬಾರಿ ಶಾಸಕನಾಗಲು ಕಾಂಗ್ರೆಸ್‌ ಪಕ್ಷ ಕಾರಣ. ಅವರ ವೈಯಕ್ತಿಕ ವರ್ಚಸ್ಸಿನಿಂದ ಶಾಸಕನಾಗಿರಲಿಲ್ಲ. ಪಕ್ಷವನ್ನು ತಾಯಿ ಎಂದು ಹೇಳಿಕೊಳ್ಳುತ್ತಿದ್ದರು. ಪಕ್ಷಾಂತರ ಮಾಡಿ ತಾಯಿಗೆ ದ್ರೋಹ ಬಗೆಯಲಿಲ್ಲವೇ ಎಂದು ಪ್ರಶ್ನಿಸಿದರೆ ತನ್ನ ತಾಯಿಯನ್ನು ಕಾಂಗ್ರೆಸ್‌ನವರು ಅವಮಾನಿಸುತ್ತಿದ್ದಾರೆ ಎಂದು ಮೊಸಳೆ ಕಣ್ಣೀರು ಹಾಕುವ ನಾಟಕ ಮಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ₹ 2,000 ಕೋಟಿ ಅನುದಾನ ನೀಡಿದ್ದೆ. ನಮಗೇ ದ್ರೋಹ ಮಾಡಿದ್ದೀರಲ್ವ? ನಾನು ನಿಮಗೆ ಅಂತಹ ಅನ್ಯಾಯ ಏನು ಮಾಡಿದ್ದೆವು’ ಎಂದು ಮುನಿರತ್ನ ಅವರನ್ನು ಪ್ರಶ್ನಿಸಿದರು.

ಭ್ರಷ್ಟಾಚಾರವೇ ಪಾರದರ್ಶಕ: ತಮ್ಮ ಸರ್ಕಾರದ ಅವಧಿಯಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇತ್ತು. ಈಗ ಬಿಜೆಪಿ ಸರ್ಕಾರದಲ್ಲಿ ಲಂಚಾವತಾರ ವಿಜೃಂಭಿಸುತ್ತಿದೆ. ಭ್ರಷ್ಟಾಚಾರವೇ ಪಾರದರ್ಶಕವಾಗಿ ನಡೆಯುತ್ತಿದೆ. ಬಿಜೆಪಿ ಸರ್ಕಾರಕ್ಕೆ ಈ ಉಪ ಚುನಾವಣೆ ಎಚ್ಚರಿಕೆಯ ಗಂಟೆ ಆಗಬೇಕು. ಮುನಿರತ್ನ ಅವರನ್ನು ಕ್ಷೇತ್ರದ ಜನರು ಮತ್ತೆ ಗೆಲ್ಲಿಸಬಾರದು ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಡಾ. ಅಜಯಸಿಂಗ್, ವಿಜಯಸಿಂಗ್ ರೋಡ್‌ ಷೋನಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT