ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ಲೂಟಿ ₹ 250 ಕೋಟಿ: ಎಚ್‌ಡಿಕೆ ಆರೋಪ

Last Updated 16 ಅಕ್ಟೋಬರ್ 2020, 21:42 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ರಾಜರಾಜೇಶ್ವರಿನಗರ ಶಾಸಕರಾಗಿದ್ದ ಅವಧಿಯಲ್ಲಿ ಕೆಲಸವನ್ನೇ ಮಾಡದೆ ₹ 250 ಕೋಟಿ ಲೂಟಿ ಮಾಡಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಜ್ಞಾನಭಾರತಿ ವಾರ್ಡ್‌ನಲ್ಲಿ ಶುಕ್ರವಾರ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೊರೊನಾ ಸಮಯದಲ್ಲಿ ಮುನಿರತ್ನ ಆಹಾರ ಕಿಟ್‌ ವಿತರಿಸಿದ್ದಾರೆ. ಆದರೆ, ಅವರು ಸ್ವಂತ ಹಣದಲ್ಲಿ ವಿತರಣೆ ಮಾಡಿಲ್ಲ. ಕೆಲಸ ಮಾಡದೇ ಲೂಟಿ ಮಾಡಿದ ಹಣದಲ್ಲೇ ಕಿಟ್‌ ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮುನಿರತ್ನ ನಕಲಿ ಮತದಾರರ ಗುರುತಿನ ಚೀಟಿ ತಯಾರಿಸಿದ ಆರೋಪ ಎದುರಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರೇ ಟೀಕೆ ಮಾಡಿದ್ದರು. ಈಗ ಅದೇ ವ್ಯಕ್ತಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ’ ಎಂದು ಟೀಕಿಸಿದರು.

ಜೆಡಿಎಸ್‌ ಪಕ್ಷ ಈ ಬಾರಿ ನಿಷ್ಠಾವಂತ ಕಾರ್ಯಕರ್ತನನ್ನು ಕಣಕ್ಕೆ ಇಳಿಸಿದೆ. ಈ ಚುನಾವಣೆ ತಮ್ಮ ಪಾಲಿಗೆ ಸತ್ವಪರೀಕ್ಷೆಯಾಗಿದೆ. ಜೆಡಿಎಸ್‌ ಪಕ್ಷ ಬೆಂಗಳೂರಿನ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಬಿಜೆಪಿ ಜನರ ನೆರವಿಗೆ ಬರಲಿಲ್ಲ. ಕೇಂದ್ರ ಸರ್ಕಾರವೂ ನೆರವಾಗಲಿಲ್ಲ. ಕೊರೊನಾ ನಿಯಂತ್ರಣಕ್ಕೆ ದೀಪ ಹಚ್ಚಿಸಿ, ಜಾಗಟೆ ಬಾರಿಸುವಂತೆ ಕರೆ ನೀಡಿದ್ದೇ ಪ್ರಧಾನಿಯ ದೊಡ್ಡ ಸಾಧನೆ ಎಂದು ಹೇಳಿದರು.

ಅಭ್ಯರ್ಥಿ ವಿ. ಕೃಷ್ಣಮೂರ್ತಿ ಮಾತನಾಡಿ, ‘ನಾನು ಹರಕೆಯ ಕುರಿಯಾಗಿದ್ದೇನೆ ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದಾರೆ. ಹಣ ಪಡೆದು ಚುನಾವಣೆ ಸ್ಪರ್ಧಿಸಿದ್ದೇನೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಎರಡೂ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಜನರು ನನ್ನನ್ನು ಬೇಕಾದರೆ ಟೀಕಿಸಲಿ. ಕುಮಾರಸ್ವಾಮಿ ಅವರ ಮೇಲೆ ಸುಳ್ಳು ಆರೋಪ ಮಾಡಬಾರದು’ ಎಂದರು.

ವಿಧಾನ ಪರಿಷತ್‌ ಸದಸ್ಯ ರಮೇಶ್ ಗೌಡ, ಮಾಜಿ ಸದಸ್ಯ ಟಿ.ಎ. ಶರವಣ, ಜೆಡಿಎಸ್‌ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT