ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಎಫ್‌ಐಆರ್‌ ದಾಖಲು: ಅನಧಿಕೃತವಾಗಿ ಮಠದಲ್ಲಿ ಮಕ್ಕಳನ್ನು ಇಟ್ಟುಕೊಂಡ ಆರೋಪ

Last Updated 18 ಅಕ್ಟೋಬರ್ 2022, 20:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಬ್ಬರು ಹೆಣ್ಣು ಮಕ್ಕಳನ್ನು ಅನಧಿಕೃತವಾಗಿ ಮುರುಘಾ ಮಠದಲ್ಲಿ ಇಟ್ಟುಕೊಂಡು, ಬಾಲನ್ಯಾಯ ಕಾಯ್ದೆ ಉಲ್ಲಂಘಿಸಿರುವ ಆರೋಪದಡಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿದ ದೂರಿನ ಆಧಾರದಲ್ಲಿ ಮುರುಘಾ ಮಠದ ಟ್ರಸ್ಟ್‌ ಅಧ್ಯಕ್ಷರಾಗಿರುವ ಶಿವಮೂರ್ತಿ ಮುರುಘಾ ಶರಣರು, ಕಾರ್ಯದರ್ಶಿಯಾಗಿದ್ದ ಪರಮಶಿವಯ್ಯ, ಹಾಸ್ಟೆಲ್‌ ಮಹಿಳಾ ವಾರ್ಡನ್‌ ಹಾಗೂ ಮಡಿಲು ದತ್ತು ಕೇಂದ್ರದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಮೂರನೇ ಪ್ರಕರಣ ಇದಾಗಿದೆ.

ಮಠದ ಆವರಣದಲ್ಲಿ ಪತ್ತೆಯಾದ ನಾಲ್ಕೂವರೆ ವರ್ಷದ ಹೆಣ್ಣು ಮಗು ಹಾಗೂ ಹಾಸ್ಟೆಲ್‌ನಲ್ಲಿದ್ದ 17 ವರ್ಷದ ಅನಾಥ ಬಾಲಕಿಗೆ ಸಂಬಂಧಿಸಿದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಬಚ್ಚಿಟ್ಟ ಆರೋಪ ಇದಾಗಿದೆ. ಇದು ಬಾಲನ್ಯಾಯ ಕಾಯ್ದೆಯ ಸೆಕ್ಷನ್‌– 32ರ ಉಲ್ಲಂಘನೆಯಾಗಿದೆ ಎಂದು ಮಕ್ಕಳ ರಕ್ಷಣಾ ಘಟಕ ಠಾಣೆಗೆ ದೂರು ನೀಡಿತ್ತು. ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಏನಿದು ಪ್ರಕರಣ?

ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಠದ ಹಾಸ್ಟೆಲ್‌ನಲ್ಲಿದ್ದ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಪ್ತ ಸಮಾಲೋಚನೆಗೆ ಒಳಡಿಸಿತ್ತು. 17 ವರ್ಷದ ಬಾಲಕಿಗೆ ಪಾಲಕರು ಇಲ್ಲದ ಸಂಗತಿ ಬೆಳಕಿಗೆ ಬಂದಿತ್ತು. ಅನಾಥ ಬಾಲಕಿಗೆ ಆಶ್ರಯ ಕಲ್ಪಿಸಿರುವುದಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿರಲಿಲ್ಲ. ಇದು ಬಾಲನ್ಯಾಯ ಕಾಯ್ದೆಯ ಉಲ್ಲಂಘನೆ ಎಂದು ಮೂಲಗಳು ವಿವರಿಸಿವೆ.

ಮತ್ತೊಂದೆಡೆ ಮುರುಘಾ ಮಠದಲ್ಲಿ ಅ. 12ರಂದು ನಾಲ್ಕೂವರೆ ವರ್ಷದ ಹೆಣ್ಣು ಮಗುವೊಂದನ್ನು ಮಕ್ಕಳ ರಕ್ಷಣಾ ಘಟಕ ಪತ್ತೆ ಮಾಡಿತ್ತು. ಪಾಲಕರಿಲ್ಲದ ಈ ಮಗುವನ್ನು ಮಠದಲ್ಲಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಮಠದ ಆವರಣದಲ್ಲೇ ಇರುವ ‘ಮಡಿಲು’ ಮಕ್ಕಳ ದತ್ತು ಕೇಂದ್ರದ ದಾಖಲೆಯಲ್ಲಿ ಈ ಮಗುವಿನ ಕುರಿತು ಉಲ್ಲೇಖಿಸದೇ ಲೋಪ ಎಸಗಿರುವುದು ಪರಿಶೀಲನೆಯಿಂದ ಖಚಿತವಾಗಿತ್ತು. ಇದನ್ನು ಮಕ್ಕಳ ರಕ್ಷಣಾ ಘಟಕ ಗಂಭೀರವಾಗಿ ಪರಿಗಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT