ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ನಿಗಾದಲ್ಲಿ ಮುರುಘಾ ಶ್ರೀ ಪ್ರಕರಣದ ತನಿಖೆ ನಡೆಸಿ: ವಕೀಲರ ಒತ್ತಾಯ

Last Updated 1 ಸೆಪ್ಟೆಂಬರ್ 2022, 10:44 IST
ಅಕ್ಷರ ಗಾತ್ರ

ಬೆಂಗಳೂರು: ಮರುಘಾ ಶರಣರ ವಿರುದ್ಧದಲೈಂಗಿಕ ದೌರ್ಜನ್ಯಪ್ರಕರಣದ ಪೊಲೀಸ್ ತನಿಖೆಯು ಕೋರ್ಟ್ ನಿಗಾದಲ್ಲಿ ನಡೆಯುವಂತೆ ನಿರ್ದೇಶನ‌ ನೀಡಬೇಕುಎಂದು ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವಕೀಲರು ಮನವಿ ಮಾಡಿದ್ದಾರೆ.

ಈ‌‌ ಸಂಬಂಧ ಗುರುವಾರ ರಿಜಿಸ್ಟ್ರಾರ್ ಜನರಲ್ ಅವರಿಗೆ ಬೆಂಗಳೂರಿನ ವೃತ್ತಿಪರ ವಕೀಲರಾದ ಸಿದ್ಧಾರ್ಥ ಭೂಪತಿ, ಶ್ರೀರಾಮ್ ಟಿ. ನಾಯಕ್, ಬಿ‌.ಎಸ್.ಗಣೇಶ ಪ್ರಸಾದ್, ವಿ.ಗಣೇಶ್ ಹಾಗೂ ಕೆ‌.ಎ.ಪೊನ್ನಣ್ಣ ಲಿಖಿತ ಮನವಿ ಸಲ್ಲಿಸಿದ್ದಾರೆ.

‘ಮುರುಘಾ ಶರಣರು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 16 ವರ್ಷದ ಬಾಲಕಿಯ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಹಾಗೂ 15ರ ಬಾಲಕಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕಳ ನೀಡಿದ್ದಾರೆ‌. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರ ತನಿಖೆ ಸಂಪೂರ್ಣ ಲೋಪಗಳಿಂದ ಕೂಡಿದೆ’ಎಂದು ವಕೀಲರು ಮನವಿಯಲ್ಲಿ ಅಕ್ಷೇಪಿಸಿದ್ದಾರೆ.

‘ಮುರುಘಾ ಶರಣರು ನಾಡಿನ ಪ್ರಭಾವಿ ಮಠಾಧೀಶರಾಗಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆ ನಡೆಸಬೇಕಾದ ಪೊಲಿಸರು ಇನ್ನೂ ಅವರನ್ನು ವಿಚಾರಣೆಗೆ ಬರಮಾಡಿಕೊಂಡಿಲ್ಲ. ದಸ್ತಗಿರಿ ಮಾಡಿಲ್ಲ. ಏತನ್ಮಧ್ಯೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮುರುಘಾ ಮಠಕ್ಕೆ ಹೋಗಿ ಶರಣರನ್ನು ಭೇಟಿ ಮಾಡಿ ಬಂದಿದ್ದಾರೆ. ಅವರನ್ನು ಬೆಂಬಲಿಸುವ ಮಾತುಗಳನ್ನಾಡಿ ಅವರ ರಕ್ಷಣೆಗೆ ನಿಂತಿದ್ದಾರೆ. ಅಂತೆಯೇ ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೂ ಹೇಳಿಕೆಯೊಂದನ್ನು ನೀಡಿ, ಈ ಪ್ರಕರಣದಲ್ಲಿ ಮಠದ ನೌಕರನ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸರ್ಕಾರ ಆರೋಪಿ ಶರಣರ ಹಿತ ಕಾಪಾಡುವಲ್ಲಿ ಸಜ್ಜಾಗಿ ನಿಂತಿರುವುದು ಕಂಡು ಬರುತ್ತಿದೆ’ಎಂದು ವಕೀಲರು ಆರೋಪಿಸಿದ್ದಾರೆ.

‘ಆದ್ದರಿಂದ, ಈ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವ ಸಾಧ್ಯತೆ ಇಲ್ಲದಿರುವ ಕಾರಣ ಕೂಡಲೇ ಕೋರ್ಟ್ ನಿಗಾದಲ್ಲಿ ಇದರ ತನಿಖೆ ನಡೆಯುವಂತೆ ನಿರ್ದೇಶಿಸಬೇಕು’ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT