ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂದ್ರ ಪದವನ್ನು ನಿಘಂಟಿನಿಂದ ಕಿತ್ತುಹಾಕಿ: ಹಂಸಲೇಖ

ಸಂಗೀತ ನಿರ್ದೇಶಕ ಹಂಸಲೇಖ ಒತ್ತಾಯ
Last Updated 9 ಏಪ್ರಿಲ್ 2022, 13:33 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾವೆಲ್ಲರೂ ಶುದ್ಧರು, ಶೂದ್ರರಲ್ಲ. ದೇಶದ ಎಲ್ಲ ನಿಘಂಟುಗಳಿಂದಲೂ ಶೂದ್ರ ಪದವನ್ನು ಕಿತ್ತು ಬಿಸಾಡಬೇಕು. ‘ಶೂದ್ರ’ ಪದಕ್ಕೆ ಪರ್ಯಾಯವಾಗಿ ‘ಶುದ್ಧ’ ಬಳಕೆಗೆ ಬರಬೇಕು. ಶುದ್ಧತ್ವ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆ ಇಲ್ಲಿನ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ರಾಜ್ಯ ಬಂಧುತ್ವ ಅಧಿವೇಶನ‘ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಇತ್ತೀಚೆಗೆ ಶೂದ್ರ ಪದವನ್ನು ಧಾರಾಳವಾಗಿ ಬಳಸಿದರು. ಹಾಳಾಗಿ ಹೋಗಿದ್ದ ಈ ಶಬ್ದ ಏಕೆ ಹೊರಗೆ ಬಂದಿತು ಎಂಬ ಬೇಸರ ಮೂಡಿತು. ಬೇರೆಯವರು ನಮ್ಮನ್ನು ಶೂದ್ರರು ಎಂದು ಸಂಬೋಧಿಸಿದರೆ ಅದಕ್ಕೆ ಹೊಣೆಗಾರರು ನಾವಲ್ಲ’ ಎಂದು ಪ್ರತಿಪಾದಿಸಿದರು.

‘ಶೂದ್ರ ಮತ್ತು ಶುದ್ಧ ಪದಕ್ಕೆ ಸಂಬಂಧಿಸಿದಂತೆ ‘ರಾ ಒತ್ತು ರದ್ದಾಯಿತು..’ ಎಂಬ ಹಾಡು ಬರೆಯುವ ಪ್ರಯತ್ನದಲ್ಲಿದ್ದೇನೆ. ಏ.14ರ ಅಂಬೇಡ್ಕರ್‌ ಜನ್ಮದಿನದಂದು ಈ ಹಾಡು ಪ್ರಕಟವಾಗಲಿದೆ. ಶುದ್ಧತ್ವವನ್ನು ನಾಯಕತ್ವಕ್ಕೆ ತರುವವರು ನಮ್ಮ ನಾಯಕರಾಗಬೇಕು’ ಎಂದು ಹೇಳಿದರು.

‘ಅಧಿಕಾರಕ್ಕೆ ಬರುವ ಎಲ್ಲರಿಂದ ಪ್ರಜಾಪ್ರಭುತ್ವ ಗೆಲ್ಲಲು ಸಾಧ್ಯವಿಲ್ಲ. ಹೊಣೆಗಾರಿಕೆ ಅರಿತ ಜ್ಞಾನಿಗಳು ಅಧಿಕಾರಕ್ಕೆ ಬಂದಾಗ ಮಾತ್ರ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಸಿಂಹಾಸನದಲ್ಲಿ ಕುಳಿತ ಅವರ ಕಾಲು ನೆಲಕ್ಕೆ ತಾಗುತ್ತಿರಬೇಕು. ಅಂತಹ ಪ್ರಭುವಿಗೆ ಮಾತ್ರ ಪ್ರಜೆಗಳು ಅರ್ಥವಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ರಾಜ ಮತ್ತು ದಳವಾಯಿ ಇಬ್ಬರೂ ಒಬ್ಬರೇ ಆಗಬೇಕು’ ಎಂದರು.

‘ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ ಶಸ್ತ್ರಾಸ್ತ್ರಗಳ ಸಾಲ ಬಿದ್ದಿದೆ. ಸಂಘಟನೆಗಾಗಿ ಕ್ರೂಢೀಕರಿಸುವ ಕೋಟಿ ಕೋಟಿ ಹಣದ ಭಾರ ಸಾಮಾನ್ಯರ ಮೇಲೆ ಬೀಳುತ್ತಿದೆ. ದೇಶದಲ್ಲಿ ಸೃಷ್ಟಿಯಾಗುತ್ತಿರುವ ಗಲಾಟೆಗಳಿಂದ ಮಹಿಳೆಯರನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.

‘ಶಿಕ್ಷಣ ವಂಚಿಸುವ ಹುನ್ನಾರ’

ಎರಡು ಧರ್ಮದ ಮೂಲಭೂತವಾದಿ ನೆಲೆಯ ಕರ್ಮಠರು ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಹುನ್ನಾರದಲ್ಲಿ ತೊಡಗಿದ್ದಾರೆ ಎಂದು ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಆಕ್ರೊಶ ವ್ಯಕ್ತಪಡಿಸಿದರು.

‘ಶಿಕ್ಷಣ ನೀಡಬೇಕಾದ ಮಕ್ಕಳ ಮನಸಿನಲ್ಲಿ ದ್ವೇಷ ತುಂಬಲಾಗುತ್ತಿದೆ. ನಮ್ಮ ಕುಲಮೂಲ, ವಂಶವೃಕ್ಷಗಳಿಗೆ ನಮ್ಮ ಮಕ್ಕಳೇ ಕೊಡಲಿಯ ಕಾವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಅಜ್ಞಾನ, ಆವೇಶ, ಭಾವೋದ್ವೇಷದ ಹೋರಾಟದಿಂದ ಹೊರಬಂದು ಮನುಷ್ಯರಾಗಬೇಕಿದೆ’ ಎಂದು ಹೇಳಿದರು.

ಯುದ್ಧಕ್ಕೆ, ಜಗಳಕ್ಕೆ ಕರೆಯಲಾಗುತ್ತಿದೆ. ಎದುರುಬಿದ್ದರೆ ಟ್ರ್ಯಾಪ್‌ ಮಾಡಿ ನಮ್ಮ ಸಂವಿಧಾನದ ಕೈಯಲ್ಲೇ ನಮ್ಮನ್ನು ಬಲಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವ ಅಗತ್ಯವಿದೆ.

- ಹಂಸಲೇಖ,ಸಂಗೀತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT